ಗಂಗಾವತಿ: ಇಲ್ಲಿನ ದೇವಘಾಟದ ಬಳಿ ಇರುವ ತುಂಗಭದ್ರಾ ನದಿ ದಡದ ಆಚೆಯ ನಡುಗಡ್ಡೆಯಲ್ಲಿ ಕಳೆದ ಒಂದು ವಾರದಿಂದ ಸಿಲುಕಿದ್ದ ಎಂಟು ಜನ ಮತ್ತು ಜಾನುವಾರುಗಳನ್ನು ಕಂದಾಯ, ಅಗ್ನಿಶಾಮಕದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಭದ್ರತೆ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಡಲಾಗಿತ್ತು. ಪರಿಣಾಮ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಜಾನುವಾರು ಮೇಯಿಸಲು ತೆರಳಿದ್ದ ಆರು ಜನ ಮತ್ತು ಇಬ್ಬರು ಕೃಷಿ ಕೂಲಿಕಾರರು ಗಂಗಾವತಿ ಸಮೀಪದಲ್ಲಿನ ನಡುಗಡ್ಡೆಯಲ್ಲಿ ಸಿಲುಕಿದ್ದರು.
ನದಿಯಲ್ಲಿನ ಪ್ರವಾಹದಿಂದಾಗಿ ಜನ ಮತ್ತು ಜಾನುವಾರುಗಳು ಜನವಸತಿ ಪ್ರದೇಶಕ್ಕೆ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ವ್ಯಕ್ತಿಯೊಬ್ಬರು ದೂರವಾಣಿ ಮೂಲಕ ತಹಶೀಲ್ದಾರ್ ನಾಗರಾಜ್ ಅವರಿಗೆ ಮಾಹಿತಿ ನೀಡಿದ ಬಳಿಕ ಸೋಮವಾರ ಆಹಾರದ ವ್ಯವಸ್ಥೆ ಮಾಡಲಾಗಿತ್ತು.
ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯಾಂತ್ರಿಕ ದೋಣಿಗಳನ್ನು ಬಳಸಿ ಎಂಟು ಜನ ಜನ ಮತ್ತು ಕುರಿ-ಮೇಕೆಗಳನ್ನು ರಕ್ಷಣೆ ಮಾಡಲಾಗಿದೆ. ಆದರೆ ದನಕರುಗಳನ್ನು ರಕ್ಷಣೆ ಮಾಡಲು ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ನೀರು ಕಡಿಮೆಯಾದ ಬಳಿಕ ಸುರಕ್ಷಿತವಾಗಿ ಅವುಗಳನ್ನು ಕರೆತರುವ ಕೆಲಸ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜಲಾವೃತವಾದ ಬೆಂಗಳೂರು ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್.. 3 ಸಾವಿರಕ್ಕೂ ಹೆಚ್ಚು ನಿವಾಸಿಗಳಿಗೆ 3 ದಿನದಿಂದ ನರಕಯಾತನೆ