ಕೊಪ್ಪಳ: ದೇವಸ್ಥಾನ ತೆರೆದು ಭಕ್ತರಿಗೆ ದರ್ಶನದ ಅವಕಾಶ ನೀಡುವ ಕುರಿತು ಸರ್ಕಾರದಿಂದ ಆದೇಶ ಬರುವವರೆಗೂ ಪ್ರತಿ ವಾರದ ಹಾಗೂ ಹುಣ್ಣಿಮೆಯ ದಿನದಂದು ತಾಲೂಕಿನ ಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಹಾಗೂ ಸಾರ್ವಜನಿಕರ, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಈಗಾಗಲೇ ನಿಷೇಧಿಲಾಗಿದೆ. ಆದರೂ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನದಂದು ಭಕ್ತರು ದೇವಸ್ಥಾನದ ಸುತ್ತಮುತ್ತ ಆಗಮಿಸುತ್ತಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ದೇವಸ್ಥಾನ ತೆರೆದು ದರ್ಶನಕ್ಕೆ ಅವಕಾಶ ಕಲ್ಪಿಸಲು ಸರ್ಕಾರದಿಂದ ಆದೇಶ ಬರುವವರೆಗೂ ಹಾಗೂ ಮುಂದಿನ ಆದೇಶದವರೆಗೆ ಪ್ರತಿ ಸೋಮವಾರ ಸಂಜೆ 5 ರಿಂದ ಮಂಗಳವಾರ ರಾತ್ರಿ 12 ರವರೆಗೆ, ಪ್ರತಿ ಗುರುವಾರ ಸಂಜೆ 5 ರಿಂದ ಶುಕ್ರವಾರ ರಾತ್ರಿ 12 ರವರೆಗೆ ಹಾಗೂ ಹುಣ್ಣಿಮೆಯ ಹಿಂದಿನ ದಿನ ಸಂಜೆ 5 ರಿಂದ ಹುಣ್ಣಿಮೆಯ ದಿನದ ರಾತ್ರಿ 12 ಗಂಟೆಯವರೆಗೆ ಹುಲಗಿ ಗ್ರಾಮದ ನದಿ ದಡ, ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ, ರೈಲು ನಿಲ್ದಾಣ ಸೇರಿದಂತೆ ಸುತ್ತಲೂ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.