ಕೊಪ್ಪಳ: ನಟ ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಪ್ರಮೋಷನ್ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದರಿಂದ ನಡೆದ ಹಾಸ್ಯ ಕಾರ್ಯಕ್ರಮ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಜರುಗಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರವನ್ನು ಬಿಜೆಪಿ ಮುಖಂಡ ಅಮರೇಶ್ ಕರಡಿ ಉದ್ಘಾಟಿಸಿದರು. ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣಕುಮಾರ್ ಗಸ್ತಿ, ನಯನಾ, ಹಿತೇಶ್ ಅವರು ತಮ್ಮ ಎಂದಿನ ಶೈಲಿಯಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸುವ ಮೂಲಕ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಇನ್ನು, ಸರಿಗಮಪದ ಅಶ್ವಿನಿ ಪ್ರವೀಣಕುಮಾರ್ ಅವರು ಸಿನಿಮಾವೊಂದರ ಗೀತೆ ಹಾಡಿದರು.
ಪ್ರವೀಣ್ ಕುಮಾರ್ ಹಾಗೂ ಹಿತೇಶ್ ಅವರು ಸಿನಿಮಾ ನಟರ, ಪ್ರಾಣಿ ಪಕ್ಷಿಗಳ ಮಿಮಿಕ್ರಿ ಮಾಡುವ ಮೂಲಕ ಜನರನ್ನು ರಂಜಿಸಿದರು.
ಸ್ಥಳೀಯರ ಅಸಮಾಧಾನ: ಕನ್ನಡ ಕಟ್ಟುವಲ್ಲಿ, ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಸಾಪ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆದರೆ, ಕೊಪ್ಪಳ ಜಿಲ್ಲಾ ಕಸಾಪ ಸಿನಿಮಾವೊಂದರ ಪ್ರಮೋಷನ್ ಸಲುವಾಗಿ ಆಯೋಜಿಸಿದ್ದ ವಿದ್ಯಾರ್ಥಿ ವಿನೋದ, ತರಲೆ ತುಂಟಾಟ ಹೆಸರಿನ ಈ ಕಾರ್ಯಕ್ರದಲ್ಲಿ ಒಂದಿಷ್ಟು ಕಲಾವಿದರು ವಿದ್ಯಾರ್ಥಿಗಳನ್ನು ರಂಜಿಸಲು ಬಳಸಿದ ಭಾಷೆ ನಿಜಕ್ಕೂ ಕನ್ನಡ ಕಟ್ಟುವಂತಹದ್ದು ಅಲ್ಲ ಎಂಬ ಮಾತುಗಳು ಕೇಳಿಬಂದವು. ಕಸಾಪಕ್ಕೆ ಈ ರೀತಿಯ ಕಾರ್ಯಕ್ರಮದ ಅಗತ್ಯವಿತ್ತೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.