ಕೊಪ್ಪಳ: ಕೂಲಿ ಕೆಲಸ ಮಾಡಿದರೂ ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ಸಮಾಜಕ್ಕೆ ವಿನಿಯೋಗಿಸೋಣ ಎಂಬ ಮನೋಭಾವನೆ ಹೊಂದಿದವರು ಈ ಸಮಾಜದಲ್ಲಿ ಇರುತ್ತಾರೆ. ಇದೇ ಮನೋಭಾವ ಹೊಂದಿರುವ ಕೆಲ ಯುವಕರು ಸೇವೆಯಲ್ಲಿ ತೊಡಗಿದ್ದಾರೆ. ನಗರದ ಗೌರಿಶಂಕರ ದೇವಸ್ಥಾನದ ಬಳಿ ಪ್ರತಿ ಶನಿವಾರ ಬರುವ ಭಕ್ತರಿಗೆ ಪ್ರಸಾದ ಸೇವೆ ಮಾಡುತ್ತಿದ್ದಾರೆ.
ಅದರಲ್ಲೇನು ವಿಶೇಷ ಎನ್ನಬೇಡಿ. ಇಲ್ಲಿ ಪ್ರತಿ ಶನಿವಾರ ಪ್ರಸಾದ ಸೇವೆ ಮಾಡುತ್ತಿರೋರು ಕೂಲಿ ಮಾಡುವ ಆಟೋ ಚಾಲಕರು ಅನ್ನೋದು ಗಮನಿಸಬೇಕಾದ ಅಂಶ. ಕಳೆದ ಸುಮಾರು 10 ವಾರಗಳಿಂದ ಪ್ರತಿ ಶನಿವಾರ ಕೂಲಿ ಕೆಲಸ ಮಾಡುವ ಸುಮಾರು 25 ಯುವಕರು ಸೇರಿಕೊಂಡು ಗೌರಿಶಂಕರ ದೇವಸ್ಥಾನದ ಬಳಿ ಪ್ರಸಾದ ಸೇವೆಯಲ್ಲಿ ತೊಡಗಿದ್ದಾರೆ. ಕೇಸರಿ ಬಾತ್, ಉಪ್ಪಿಟ್ಟು ಅಥವಾ ಕೇಸರಿಬಾತ್ ಹಾಗೂ ಪಲಾವ್ ಮಾಡಿ ಜನರಿಗೆ ಬಡಿಸುತ್ತಾರೆ.
ಇದಕ್ಕಾಗಿ ಪ್ರತಿ ವಾರ ಸುಮಾರು 3ರಿಂದ ಮೂರೂವರೆ ಸಾವಿರ ರುಪಾಯಿ ಖರ್ಚಾಗುತ್ತಿದೆ. ಇನ್ನು ಈ ಯುವಕರ ಸೇವೆಯನ್ನು ಗಮನಿಸಿದ ಕೆಲವರು ಇವರಿಗೆ ಇತ್ತೀಚೆಗೆ ಸಾಥ್ ನೀಡುತ್ತಿದ್ದಾರೆ.