ಗಂಗಾವತಿ: ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ಕಾಂಗ್ರೆಸ್ ಮುಖಂಡ ಹನುಮೇಶ ನಾಯಕ ಎಂಬವರ ಪುತ್ರನ ಮದುವೆ ಸಮಾರಂಭದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಕುರಿತಾದ ಫೋಟೋಗಳು ವೈರಲ್ ಆಗಿವೆ.
ಕೊಲೆ ಆರೋಪ ಹೊತ್ತಿರುವ ವ್ಯಕ್ತಿಯೊಂದಿಗೆ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡು ಸನ್ಮಾನ ಮಾಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ, ಗಂಗಾವತಿ ಗ್ರಾಮೀಣ ಸಿಪಿಐ ಹಾಗೂ ಕನಕಗಿರಿ ಪಿಎಸ್ಐ ತಲೆದಂಡವಾಗಿದೆ. ಸಮವಸ್ತ್ರದಲ್ಲಿಯೇ ಆರೋಪಿಯೊಂದಿಗೆ ವೇದಿಕೆ ಹಂಚಿಕೊಂಡ ಪರಿಣಾಮ ಇಲಾಖೆ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.
ಇದರ ಬೆನ್ನಲ್ಲೆ ಇದೀಗ ಬಳ್ಳಾರಿ ಪೊಲೀಸ್ ವಲಯಕ್ಕೊಳಪಡುವ ಸಿಂಧನೂರು ಡಿವೈಎಸ್ಪಿ ವೆಂಕಟಪ್ಪ ನಾಯಕ್ ಮತ್ತು ಕಂಪ್ಲಿಯ ಗ್ರಾಮೀಣ ಸಿಪಿಐ ಸುರೇಶ ತಳವಾರ ಮದುವೆಯಲ್ಲಿ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿವೆ.
ವೆಂಕಟಗಪ್ಪ ನಾಯಕ್ ಈ ಹಿಂದೆ ಕೊಪ್ಪಳದ ಡಿವೈಎಸ್ಪಿ ಹಾಗೂ ಸುರೇಶ ತಳವಾರ ಗಂಗಾವತಿಯ ಗ್ರಾಮೀಣ ವೃತ್ತದ ಸಿಪಿಐ ಆಗಿ ಸೇವೆ ಸಲ್ಲಿದಿದ್ದಾರೆ. ಕೇವಲ ಒಂದು ವರ್ಷದ ಹಿಂದಷ್ಟೇ ಈ ಇಬ್ಬರು ಅಧಿಕಾರಿಗಳು ವರ್ಗಾವಣೆಯಾಗಿದ್ದರು.