ಗಂಗಾವತಿ: ಪಟ್ಟಣದಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಖದೀಮರ ಕುರಿತು ಹಿಂದೂಪರ ಸಂಘಟನೆಯ ಹಿರಿಯ ಮುಖಂಡ ನೀಲಕಂಠಪ್ಪ ನಾಗಶೆಟ್ಟಿ ಅವರು ತೀವ್ರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಜನರ ಸಹಾನುಭೂತಿ ಗಿಟ್ಟಿಸಿಕೊಳ್ಳಲು ಹಾಗೂ ಬಡತನದಿಂದ ಕಳ್ಳತನ ಮಾಡಿದ್ದೇವೆ ಎಂದು ಬಿಂಬಿಸಿದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ ಎಂಬ ಕಾರಣಕ್ಕೆ ಜಾನುವಾರು ಕಳ್ಳರು ಕೊರೊನಾದ ಕತೆಯನ್ನು ಕಟ್ಟಿದ್ದಾರೆಂದು ಹಿಂದೂಪರ ಸಂಘಟನೆಯ ಹಿರಿಯ ಮುಖಂಡ ನೀಲಕಂಠಪ್ಪ ನಾಗಶೆಟ್ಟಿ ಆರೋಪಿಸಿದ್ದಾರೆ.
ಈ ಜಾನುವಾರು ಕಳ್ಳರು ಕಳೆದ ಹಲವು ವರ್ಷದಿಂದ ಇದೇ ದಂಧೆ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸಲ ಪೊಲೀಸರಿಗೆ ಹಿಡಿದು ಕೊಟ್ಟಿದ್ದೇವೆ. ಆದರೂ ಇವರ ವರ್ತನೆಯಲ್ಲಿ ಬದಲಾವಣೆಯಾಗಿಲ್ಲ.
ಬದಲಿಗೆ ಬಡವರು ಎಂದು ಬಿಂಬಿಸಿಕೊಳ್ಳುತ್ತಿರುವ ಜಾನುವಾರು ಕಳ್ಳರು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬೊಲೆರೋ, ಟಾಟಾಸುಮೋ ಸೇರಿದಂತೆ ನಾಲ್ಕಾರು ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ನಗರದಲ್ಲಿ ಕಂಡು ಬರುವ ಬಿಡಾಡಿ ಜಾನುವಾರುಗಳು ಇವರ ಟಾರ್ಗೆಟ್ ಆಗಿವೆ.
ಜನ ಸಂಚಾರ ವಿರಳವಾಗಿರುವ ಮಧ್ಯರಾತ್ರಿಯಂತಹ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಜಾನುವಾರುಗಳನ್ನು ಟಾರ್ಗೆಟ್ ಮಾಡುವ ಈ ಖದೀಮರು, ಅವುಗಳಿಗೆ ಮಾರಣಾಂತಿಕವಾಗಿ ಗಾಯ ಮಾಡುತ್ತಾರೆ. ಎರಡು ಮೂರು ದಿನ ಬಿಟ್ಟು ಅವು ಅಶಕ್ತವಾದ ಬಳಿಕ ಕದ್ದು ಸಾಗಿಸುತ್ತಿದ್ದರು. ಈ ಬಗ್ಗೆ ಇವರ ವಿರುದ್ಧ ಸಾಕಷ್ಟು ದೂರು ದಾಖಲಾಗಿವೆ ಎಂದು ನೀಲಕಂಠಪ್ಪ ತಿಳಿಸಿದ್ದಾರೆ.