ಗಂಗಾವತಿ: ಇನ್ನೇನು ದೀಪಾವಳಿ ಹಬ್ಬ ಆರಂಭವಾಯಿತು ಎನ್ನುವಷ್ಟರಲ್ಲಿ ಪೊಲೀಸ್, ಜೆಸ್ಕಾಂ ಮತ್ತು ನಗರಸಭೆಯ ಅಧಿಕಾರಿಗಳು ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿನ ಬೀದಿಬದಿಯ ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ.
ಹಲವು ವರ್ಷಗಳಿಂದ ತಮ್ಮ ಅಂಗಡಿ ಮುಂದಿನ ಪಾದಚಾರಿ ರಸ್ತೆಯನ್ನು ಆಕ್ರಮಿಸಿದ್ದ, ವ್ಯಾಪಾರಿಗಳಿಗೆ ಹಾಗೂ ಪಾದಚಾರಿ ರಸ್ತೆ ಮೇಲೆ ಇಟ್ಟಿದ್ದ ಸಣ್ಣ ಅಂಗಡಿಗಳ ತೆರವು ಕಾರ್ಯಾಚರಣೆ ಮಾಡಲಾಯಿತು.
ನಗರಸಭೆ ಪೌರಾಯುಕ್ತ ದೇವಾನಂದ ದೊಡ್ಡಮನಿ ಹಾಗೂ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸೇರಿ ತೆರವು ಕಾರ್ಯಾಚರಣೆ ನಡೆಸಿದರು.
ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ, ದೊಡ್ಡ ಅಂಗಡಿಗಳನ್ನು ಕಟ್ಟಿಕೊಂಡಿರುವ ನೂರಾರು ವ್ಯಾಪಾರ ಸಂಕಿರಣ ಕಟ್ಟಡಗಳು ನಗರದ ಪಾದಚಾರಿ ರಸ್ತೆ ಆಕ್ರಮಿಸಿವೆ. ಈ ಬಗ್ಗೆ ಗಮನ ಹರಿಸದ ಅಧಿಕಾರಿಗಳು, ಬಡಪಾಯಿಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಗೂಡಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.