ಕೊಪ್ಪಳ: ಇಂದಿನ ರಾಜಕಾರಣ ಎಷ್ಟೊಂದು ಹೊಲಸಾಗಿದೆ ಎಂದರೆ ಮಾನ ಮರ್ಯಾದೆ ಇದ್ದೋರು ರಾಜಕಾರಣ ಮಾಡಬಾರದು. ಎಲ್ಲ ಬಿಟ್ಟು ನಿಂತಿರೋರು ಮಾತ್ರ ಇಂದು ರಾಜಕಾರಣ ಮಾಡುವ ಸ್ಥಿತಿ ಇದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಗುಡುಗಿದರು.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟ ಗ್ರಾಮದಲ್ಲಿ ಮಾತನಾಡಿದ ಅವರು, ಇಡೀ ರಾಜಕೀಯ ವ್ಯವಸ್ಥೆ ಹಾಳಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ ಕಾನೂನು ಮಾಡಬೇಕಾದವರು, ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದವರು ರಾಜಕೀಯ ಅನೈತಿಕತೆಯ ಆಡಳಿತ ನಡೆಸುತ್ತಿದ್ದಾರೆ. ಹಾಳಾಗಿರುವ ವ್ಯವಸ್ಥೆಯನ್ನ ನಾಯಕರುಗಳು ಸರಿ ಮಾಡಬೇಕು. ಆದರೆ ಅವರುಗಳೇ ಸರಿ ಇಲ್ಲ ಅಂದ್ರೆ ಏನ್ ಮಾಡೋದು? ಎಮದರು.
ಇದು ಒಂದು ರಾಜಕೀಯ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಆದರೆ, ಬಿಜೆಪಿ ದಿವಾಳಿತನಕ್ಕೆ ನಿಂತಿದೆ. ಅವರ ರಾಜಕಾರಣವನ್ನು ಸರಿ ಮಾಡಬೇಕಾದರೆ ಮೊದಲು ಜನರು ಸರಿಯಾಗಬೇಕು ಎಂದರು. ಇನ್ನು ಶಾಸಕ ಆನಂದ್ ಸಿಂಗ್ ಮೇಲೆ ರೆಸಾರ್ಟ್ನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಬ್ಬರು ಹೊಡೆದಿದ್ದಾರೆ ಅಂತಾರೆ, ಇನ್ನೊಬ್ಬರು ಇಲ್ಲ ಅಂತಾರೆ. ಹೀಗಿರುವಾಗ ಅ ಬಗ್ಗೆ ನಾನೇನು ಹೇಳಲಿ?. ಈ ಪ್ರಕರಣ ಕುರಿತಂತೆ ಕಂಪ್ಲಿ ಶಾಸಕ ಗಣೇಶ ಅವರ ಮೇಲೆ ಕೇಸ್ ದಾಖಲಾಗಿ ಶಿಕ್ಷೆಗೆ ಗುರಿಯಾದರೆ ಅವರಿಗೆ ಮಂತ್ರಿ ಸ್ಥಾನ ದೊರಕುವುದಿಲ್ಲ ಎಂದರು.
ಯಲಬುರ್ಗಾ ಕ್ಷೇತ್ರದಲ್ಲಿ ನಾನು, ನಮ್ಮ ಸರ್ಕಾರದ ಸಾಧನೆ ಮತ್ತು ಜಾರಿಗೆ ತಂದಿರುವ ಯೋಜನೆಗಳನ್ನು ಹೊಂದಿದ ಫ್ಲೆಕ್ಸ್ ಹಾಕಿಸಿದ್ದೇನೆ. ಇದು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅಲ್ಲ. ಯಾರು ಇದನ್ನು ಟೀಕಿಸುತ್ತಾರೋ ಅವರು ಬೇಕಾದರೆ ಹತ್ತು ಫ್ಲೆಕ್ಸ್ ಹಾಕಿಸಿಕೊಳ್ಳಲಿ ಎಂದರು.
ಇನ್ನು ಕೃಷ್ಣ ಬಿ ಸ್ಕೀಂ ಅನುಷ್ಠಾನ ಆಗೋದು ಅಷ್ಟು ಸುಲಭವಾಗಿಲ್ಲ. ಸ್ಕೀಂ ಅನುಷ್ಠಾನ ಮಾಡಲು ಒಂದೂವರೆ ಲಕ್ಷ ಕೋಟಿ ಬೇಕು ಎಂದರು. ಇನ್ನು ಅಸಲಿಗೆ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಹಾಕಿಲ್ಲ. ಆದರೆ, ಹೆಸರು ಕೇಳಿಬರುತ್ತಿದೆ ಎಂದರು.