ಗಂಗಾವತಿ: ಬಾಲಕರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿ ಅವೈಜ್ಞಾನಿಕವಾಗಿ ಶೌಚಾಲಯ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಹಾಗೂ ನಾಗಕರಿಕರು ವಿರೋಧ ವ್ಯಕ್ತಪಡಿಸಿದರು.
ಉದ್ದೇಶಿತ ಸ್ಥಳದಿಂದ ಕೆಲವೇ ಅಡಿಗಳ ಅಂತರದಲ್ಲಿರುವ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಎರಡು ಸಾರ್ವಜನಿಕ ಶೌಚಾಲಯಗಳಿವೆ. ಇಲ್ಲಿಂದ 100 ಮೀ. ದೂರದ ಪೊಲೀಸ್ ಠಾಣೆ ಹತ್ತಿರ ಸುಲಭ ಶೌಚಾಲಯ ಇದೆ. ಇಷ್ಟೆಲ್ಲದರ ನಡುವೆ ಇಲ್ಲಿ ಶೌಚಾಲಯ ಅಗತ್ಯವಿರಲಿಲ್ಲ. ಆದ್ರೆ, ನಗರಸಭೆಯವರು ಇರುವ ಜಾಗವನ್ನು ಸಂರಕ್ಷಿಸುವುದನ್ನು ಬಿಟ್ಟು ಶೌಚಾಲಯ ನಿರ್ಮಾಣ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಈಶ್ವರ ಶೆಟ್ಟಿ ಆರೋಪಿಸಿದರು.
ನಿತ್ಯ ಕಾಲೇಜಿಗೆ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅಲ್ಲದೇ, ವಾಕಿಂಗ್ ಟ್ರಾಕ್ ನಲ್ಲಿ ವಾಯು ವಿಹಾರಕ್ಕೆ ನೂರಾರು ಮಂದಿ ಬರುತ್ತಾರೆ. ಇಂತಹ ಪರಿಸರವನ್ನು ಹಾಳು ಮಾಡಲು ನಗರಸಭೆ ಮುಂದಾಗಿದೆ ಎಂದು ವಾಯು ವಿಹಾರಿ ಶರಣಪ್ಪ ಆರೋಪಿಸಿದರು. ಕೂಡಲೇ ಶೌಚಾಲಯ ನಿರ್ಮಾಣ ಕಾರ್ಯ ಸ್ಥಗಿತವಾಗಬೇಕು ಎಂದು ಸಮೀಪದ ಹಣ್ಣಿನ ವ್ಯಾಪಾರಿಗಳು ಒತ್ತಾಯಿಸಿದರು.