ಕೊಪ್ಪಳ : ಬಾಲ್ಯದಲ್ಲೇ ಅನಾಥಳಾದ ಬಾಲಕಿಯೊಬ್ಬಳು ಬಾಲಮಂದಿರದಲ್ಲಿದ್ದುಕೊಂಡೇ ಕಷ್ಟಪಟ್ಟು ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಅಂಕ ಪಡೆದು ಪಾಸಾಗಿದ್ದಾಳೆ. ಬಾಲಕಿ ಹುಲಿಗೆಮ್ಮ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 92.32 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಬಾಲಕಿ ಹುಲಿಗೆಮ್ಮ ಉದಯ ಮತ್ತು ಸುಮಾ ದಂಪತಿಯ ಪುತ್ರಿ. ಆದರೆ ಕೆಲವು ವರ್ಷಗಳ ಹಿಂದೆಯೇ ಉದಯ ಪತ್ನಿ ಸುಮಾರನ್ನು ಬಿಟ್ಟು ಹೋಗಿದ್ದರು. ಇದರಿಂದ ಹುಲಿಗೆಮ್ಮ ತಾಯಿಯೊಂದಿಗೆ ಇಲ್ಲಿನ ಭಾಗ್ಯನಗರದಲ್ಲಿ ವಾಸವಾಗಿದ್ದರು. ಇದರ ನಡುವೆ ಮನೆಗೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಸುಮಾ, ಕೆಲಸ ಹುಡುಕಿಕೊಂಡು ಹುಬ್ಬಳ್ಳಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ತಾಯಿ ನಿಧನರಾಗಿದ್ದು, ಹೀಗಾಗಿ ಹುಲಿಗೆಮ್ಮ ಅನಾಥೆಯಾಗಿದ್ದಾಳೆ. ಬಳಿಕ ವಾಪಸ್ ಭಾಗ್ಯನಗರಕ್ಕೆ ಬಂದ ಬಾಲಕಿಯನ್ನು, ಪರಿಚಯಸ್ಥರೊಬ್ಬರು ಬಾಲಮಂದಿರಕ್ಕೆ ಸೇರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಾಲಕಿ ಹುಲಿಗೆಮ್ಮ, ನಾನು 2014ರಲ್ಲಿ ಕೊಪ್ಪಳದಲ್ಲಿರುವ ಬಾಲಮಂದಿರಕ್ಕೆ ಬಂದು ಸೇರಿದೆ. ನಾನು ಚಿಕ್ಕವಳಿರುವಾಗಲೇ ನನ್ನ ತಂದೆ ತಾಯಿ ಬೇರೆಯಾಗಿದ್ದರು. ಕೆಲಸಕ್ಕೆಂದು ಭಾಗ್ಯನಗರದಿಂದ ಹುಬ್ಬಳ್ಳಿಗೆ ತೆರಳಿದ್ದ ವೇಳೆ ಅಮ್ಮ ತೀರಿಕೊಂಡರು. ಆಗ ಪರಿಚಯಸ್ಥರೊಬ್ಬರು ಸಹಾಯ ಮಾಡಿ ಒಂದು ವಾರದ ಬಳಿಕ ಬಾಲಮಂದಿರಕ್ಕೆ ಸೇರಿಸಿದರು. ಮೊದಲು ಇಲ್ಲಿಗೆ ಸೇರಿದ ಸಂದರ್ಭದಲ್ಲಿ ನನಗೆ ತಂದೆ ತಾಯಿಯ ನೆನಪಾಗುತ್ತಿತ್ತು. ಓದಲು ಕಷ್ಟವಾಗುತ್ತಿತ್ತು. ಈ ಸಂದರ್ಭದಲ್ಲಿ ಬಾಲಮಂದಿರದ ಸಿಬ್ಬಂದಿ ನನಗೆ ತುಂಬಾ ಸಹಾಯ ಮಾಡಿದರು. ಅಷ್ಟೇ ಅಲ್ಲದೆ ನನಗೆ ತಂದೆ ತಾಯಿ ಸ್ಥಾನದಲ್ಲಿ ನಿಂತು ತುಂಬಾ ಧೈರ್ಯ ತುಂಬಿದರು. ಜೊತೆಗೆ ಓದಲು ಪ್ರೋತ್ಸಾಹ ನೀಡಿದರು ಎಂದು ಬಾಲಕಿ ಹುಲಿಗೆಮ್ಮ ಕೃತಜ್ಞತೆ ಸಲ್ಲಿಸಿದಳು.
ಈಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 92.32 ಅಂಕಗಳನ್ನು ಪಡೆದಿದ್ದೇನೆ. ತುಂಬಾ ಖುಷಿಯಾಗಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಿ ನೀಟ್ ಪರೀಕ್ಷೆ ಬರೆಯುವ ಗುರಿ ಹೊಂದಿದ್ದೇನೆ ಎಂದು ಬಾಲಕಿ ತನ್ನ ಭವಿಷ್ಯದ ಗುರಿಯ ಬಗ್ಗೆ ಹೇಳಿಕೊಂಡಳು.
ಇದನ್ನೂ ಓದಿ : SSLC ಫಲಿತಾಂಶ: ಚಿಕ್ಕೋಡಿಗೆ 12, ಬೆಳಗಾವಿ ಜಿಲ್ಲೆಗೆ 26ನೇ ಸ್ಥಾನ... 625ಕ್ಕೆ 625 ಅಂಕ ಪಡೆದ ಅನುಪಮಾ ಮನೆಯಲ್ಲಿ ಸಂಭ್ರಮ
ವೈದ್ಯಳಾಗುವ ಕನಸು : ಬಾಲಮಂದಿರದಲ್ಲಿದ್ದು ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಹುಲಿಗೆಮ್ಮ ನಂತರ ಅಳವಂಡಿಯ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮೆಟ್ರಿಕ್ ಮುಗಿಸಿದ್ದು, ಶೇ. 92 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಮುಂದೆ ಬಳ್ಳಾರಿಯಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡು ವೈದ್ಯಳಾಗಬೇಕೆಂಬ ಕನಸು ಹೊಂದಿದ್ದಾಳೆ. ಬಾಲಮಂದಿರದ ಈ ಅನಾಥೆಯ ಸಾಧನೆಯಿಂದ ಅಲ್ಲಿನ ಸಿಬ್ಬಂದಿ ಖುಷಿಯಾಗಿದ್ದು, ಹುಲಿಗೆಮ್ಮ ಉನ್ನತ ಶಿಕ್ಷಣ ಪಡೆದು ಆಕೆಯ ಕನಸುಗಳೆಲ್ಲ ನನಸಾಗಲಿ ಎಂದು ಶುಭ ಹಾರೈಸಿದ್ದಾರೆ.
ಇನ್ನು, ಎಷ್ಟೇ ಕಷ್ಟ ಬಂದರೂ ಯಾವುದಕ್ಕೂ ಜಗ್ಗದೇ ಉತ್ತಮ ಸಾಧನೆ ಮಾಡಿರುವ ಸಂತೃಪ್ತಿ ಇದೆ. ಬಾಲ ಮಂದಿರದ ಸಿಬ್ಬಂದಿಯ ಪ್ರೀತಿ, ಸ್ನೇಹಿತೆಯರ ಆಸರೆ, ಶಾಲಾ ಶಿಕ್ಷಕರ ಸಹಕಾರದೊಂದಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ ಎಂದು ಹೇಳುತ್ತಾರೆ ಹುಲಿಗೆಮ್ಮ.
ಇದನ್ನೂ ಓದಿ : ದ್ವಿತೀಯ PUC ವಿದ್ಯಾರ್ಥಿಗಳ ಗಮನಕ್ಕೆ: ಪೂರಕ ಪರೀಕ್ಷಾ ದಿನಾಂಕ ಬದಲಾವಣೆ