ಕುಷ್ಟಗಿ: ಹವಾಮಾನದ ವೈಪರೀತ್ಯ ಪರಿಣಾಮ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವಿನ ಹಣ್ಣಿನ ಆಗಮನ ಮೊದಲೇ ವಿಳಂಬವಾಗಿದೆ. ಇದರಿಂದಾಗಿ ಮಾವು ಪ್ರಿಯರು ಸಾವಯವ ಕೃಷಿ ಆಧಾರಿತ ಮಾವಿನ ಹಣ್ಣಿನ ಮೊರೆ ಹೋಗಿದ್ದು, ದುಬಾರಿಯಾದರೂ ಸಹ ತೋಟಗಳಿಗೆ ಹೋಗಿ ಮಾವು ಖರೀದಿಸುತ್ತಿದ್ದಾರೆ.
ಲಾಕ್ಡೌನ್ ತೆರವುಗೊಳಿಸಿದ ಬಳಿಕ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಹಣ್ಣುಗಳನ್ನು ಕಾರ್ಬೈಡ್ ರಾಸಾಯನಿಕ ಬಳಸಿ ಕೃತಕವಾಗಿ ಮಾಗಿಸುವ ವಿಷಯ ತಿಳಿದಿರುವ ಗ್ರಾಹಕರು, ಖರೀದಿಗೆ ಹಿಂದೇಟು ಹಾಕುತ್ತಿದ್ದರೆ, ಕೊರೊನಾ ವೈರಸ್ ಕಾರಣ ಇನ್ನೊಂದೆಡೆಯಾಗಿದೆ. ಅಲ್ಲದೆ ಲಾಕ್ಡೌನ್ ಎಫೆಕ್ಟ್ನಿಂದಾಗಿ ಮಾವಿನ ಫಸಲನ್ನೇ ನಂಬಿಕೊಂಡಿದ್ದ ಕೃಷಿಕರಿಗೆ ಈ ವರ್ಷದ ಸೀಸನ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ವೆಲ್ಲಿಚಟ್ಟಿ ಬಾಬಜಿ ಎಂಬುವರು ತಾಲೂಕಿನ ವಜ್ರಬಂಡಿಯ ರಸ್ತೆಯ ಪಕ್ಕದಲ್ಲಿರುವ ತಮ್ಮ 7 ಎಕರೆ ಜಮೀನಿನಲ್ಲಿ ಮಾವು ಬೆಳೆದಿದ್ದಾರೆ. ಈಚೆಗೆ ಬಂದ ಬಿರುಗಾಳಿ ಸಹಿತ ಮಳೆಗೆ 2 ಟನ್ ಮಾವು ನೆಲಕಚ್ಚಿದೆ. ಸಂಪೂರ್ಣ ಸಾವಯವ ಕೃಷಿ ಆಧಾರಿತ ಬೆಳೆಗೆ ಸಗಣಿ ಗೊಬ್ಬರ ಹೊರತುಪಡಿಸಿದರೆ ಯಾವುದೇ ರಾಸಾಯನಿಕ ಬಳಸಿಲ್ಲ. ಅಲ್ಲದೆ ನೀರಿನ ಸಿಂಪಡಣೆ (ಸ್ಪ್ರೇ) ಮಾಡಿರುವುದರಿಂದ ಜಿಗಿ ಬಾಧೆ ಇಲ್ಲ.
ದುಪ್ಪಟ್ಟಾದ ಮಾವಿನ ಬೆಲೆ
ದಶಹರಿ ಮಲ್ಲಿಕಾ, ಕೇಸರ್, ರಸಪೂರಿ ಕಾಜು, ಆ್ಯಪಲ್, ಲಡ್ಡು, ಚರ್ರಿ, ಬದಾಮಿ, ಆಪೂಸ್ ಮಾವು ಹಾಗೂ ಚಟ್ನಿಕಾಯಿ ಮಾವು ಸೇರಿದಂತೆ ತರಹೇವಾರಿ ತಳಿಗಳನ್ನು ಬೆಳೆದಿದ್ದು, ಇವುಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ದುಪ್ಪಟ್ಟು ದರವಿದೆ. ಕಳೆದ ವರ್ಷ ಕೆಜಿಗೆ 60ರಿಂದ 80 ರೂ. ಇದ್ದ ಮಲ್ಲಿಕಾ, ಕೇಸರ ತಳಿಯ ಹಣ್ಣುಗಳಿಗೆ ಸದ್ಯ ಮಾರುಕಟ್ಟೆಯಲ್ಲಿ 150 ರೂ. ದರವಿದೆ. ಬಹಳಷ್ಟು ಜನರು ಇಷ್ಟ ಪಡುವ ದಶಹರಿಗೆ ಕಳೆದ ಬಾರಿ ಕೆಜಿಗೆ 150 ರೂ. ಇತ್ತು. ಸದ್ಯ ಕೆಜಿಗೆ 300 ರೂ. ಆದಾಗ್ಯೂ ಜನ ಸಾವಯವ ಕೃಷಿಯಾಧರಿತ ಎನ್ನುವ ಬ್ರ್ಯಾಂಡ್ ಉಳಿಸಿಕೊಂಡಿರುವುದರಿಂದ ದುಬಾರಿಯಾದರೂ ಖರೀದಿಸುತ್ತಿದ್ದಾರೆ.
ಈ ಬಾರಿಯ ಹವಾಮಾನ ವೈಪರೀತ್ಯದಿಂದ ಬಂಪರ್ ಫಸಲು ನಿರೀಕ್ಷೆ ಕೈ ಕೊಟ್ಟಿದೆ. ಆದಾಗ್ಯೂ ಮಲ್ಲಿಕಾ, ಕೇಸರ್ ಈಗಾಗಲೇ 15 ಟನ್ ಮಾರಾಟವಾಗಿದೆ. ಮಾಗಿದ ಗುಣಲಕ್ಷಣದ ಮಾವನ್ನು ಕಟಾವು ಮಾಡಿ ಭತ್ತದ ಹುಲ್ಲಿನಲ್ಲಿ ಮುಚ್ಚಿಡಲಾಗುತ್ತಿದೆ ಎಂದು ವಿ.ಜ್ಯೋತಿ ವಿವರಿಸಿದರು.