ಗಂಗಾವತಿ (ಕೊಪ್ಪಳ): ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಬಿಟ್ಟು ಕಳುಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ತಹಶೀಲ್ದಾರ್ ಯು. ನಾಗರಾಜ್ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.
ಟ್ರ್ಯಾಕ್ಟರ್ ಬಿಟ್ಟು ಕಳುಹಿಸಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೇ ಅಕ್ರಮ ಖನಿಜಗಳ ಸಾಗಣಿಕೆ ನಿಯಂತ್ರಣಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ನಡಾವಳಿಗೆ ವಿರುದ್ಧವಾಗಿದೆ. ಹೀಗಾಗಿ 24 ಗಂಟೆಯೊಳಗೆ ನೋಟಿಸ್ಗೆ ಉತ್ತರ ನೀಡಬೇಕು ಎಂದು ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಸೂಚನೆ ನೀಡಿದ್ದಾರೆ.
ಏನಿದು ಘಟನೆ..?
ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ವಾಹನವನ್ನು ಜು.18ರಂದು ನಗರದಲ್ಲಿ ಕಂದಾಯ ಸಿಬ್ಬಂದಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ವಾಹನದ ಮೇಲೆ ಎಫ್ಐಆರ್ ದಾಖಲಿಸದೇ ಅಥವಾ ದಂಡ ಪಾವತಿಸದೇ ವಾಹನವನ್ನು ಬಿಟ್ಟು ಕಳುಹಿಸುವಂತೆ ತಹಶೀಲ್ದಾರ್ ಪೊಲೀಸರಿಗೆ ಪತ್ರ ಬರೆದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ತಹಶೀಲ್ದಾರ್ಗಳ ದಿಢೀರ್ ವರ್ಗಾವಣೆ
ಇಲ್ಲಿನ ಕನಕಗಿರಿ ಹಾಗೂ ಕಾರಟಗಿ ತಾಲೂಕು ತಹಶೀಲ್ದಾರ್ಗಳ ವರ್ಗಾವಣೆಯಾಗಿದೆ. ಕನಕಗಿರಿ ತಹಶೀಲ್ದಾರ್ ರವಿ ಅಂಗಡಿಗೆ ಅವರನ್ನು ಕಾರಟಗಿಗೆ ಹಾಗೂ ಮುಳಬಾಗಿಲು ತಹಶೀಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಆಗಿದ್ದ ಎಂ. ಧನಂಜಯ ಅವರನ್ನು ಕನಕಗಿರಿಗೆ ವರ್ಗಾಯಿಸಿ ಕಂದಾಯ ಇಲಾಖೆಯ ಕಾರ್ಯದರ್ಶಿ ರಶ್ಮಿ ಎಂ.ಎಸ್. ಆದೇಶಿದಿದ್ದಾರೆ.
ಕಾರಟಗಿ ತಹಶೀಲ್ದಾರ್ ಹುದ್ದೆಯಲ್ಲಿದ್ದ ಶರಣಪ್ಪ ಕಟ್ಟೋಳಿ ವರ್ಗಾವಣೆಯಾಗಿ 1 ವರ್ಷ (ಕೇವಲ 8 ತಿಂಗಳು) ಪೂರ್ಣಗೊಳ್ಳುವ ಮುನ್ನವೇ ಮತ್ತೆ ದಿಢೀರ್ ಎಂದು ಸ್ಥಳ ನಿಯೋಜನೆಯಾಗದೇ ಎತ್ತಂಗಡಿಯಾಗಿದ್ದಾರೆ.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಆರೋಪ: ಎಸಿಬಿಯಲ್ಲಿ ಪೊಲೀಸರ ವಿರುದ್ಧವೇ FIR!