ಕೊಪ್ಪಳ: ಸಾಮಾನ್ಯ ವ್ಯಕ್ತಿಯೂ ವಿಮಾನದಲ್ಲಿ ಪ್ರಯಾಣ ಮಾಡಲಿ ಹಾಗೂ ಪ್ರಾದೇಶಿಕ ವಾಯುಯಾನದ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಉಡಾನ್ ಯೋಜನೆ ರೂಪಿಸಿದೆ. ಕೊಪ್ಪಳ ಜಿಲ್ಲೆಗೂ ಉಡಾನ್ ಯೋಜನೆ ಘೋಷಣೆಯಾಗಿ ಸುಮಾರು ನಾಲ್ಕು ವರ್ಷ ಕಳೆದರೂ ವಿಮಾನ ಹಾರಾಟ ಕೇವಲ ಕನಸಾಗಿ ಉಳಿದಿದೆ.
ಸ್ಥಳೀಯ ಖಾಸಗಿ ಏರ್ಪೋರ್ಟ್ ಸಹಕಾರದೊಂದಿಗೆ ಇನ್ನೇನು ಉಡಾನ್ ವಿಮಾನ ಹಾರಾಟ ಶುರುವಾಗುತ್ತದೆ ಎಂಬ ಕನಸು ಸಹ ಈಗ ಮುರಿದು ಬಿದ್ದಿದೆ. ಖಾಸಗಿ ಏರ್ಪೋರ್ಟ್ ಹಾಕಿದ ಟರ್ಮ್ಸ್ ಅಂಡ್ ಕಂಡೀಷನ್ಸ್ ನಿಂದಾಗಿ ಸದ್ಯಕ್ಕೆ ಉಡಾನ್ ಯೋಜನೆ ಟೇಕ್ ಆಫ್ ಆಗದಂತಾಗಿದೆ.
ಓದಿ: BJP ಅನ್ನೋ ದೊಡ್ಡ ಕುಟುಂಬದಲ್ಲಿ ಅಸಮಾಧಾನ ಇರೋದು ಸ್ವಾಭಾವಿಕ: Nirani
2017 ರಲ್ಲಿ ಕೇಂದ್ರ ಸರ್ಕಾರ ಉಡಾನ್ ಯೋಜನೆ ಘೋಷಣೆಯ ಮೊದಲ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯೂ ಸೇರಿದೆ. ಕೊಪ್ಪಳ - ಬೆಂಗಳೂರು, ಕೊಪ್ಪಳ - ಗೋವಾ ಹಾಗೂ ಕೊಪ್ಪಳ-ಹೈದರಾಬಾದ್ಗೆ ಉಡಾನ್ ಯೋಜನೆಯ ವಿಮಾನ ಹಾರಾಟಕ್ಕೆ ಮೂರು ರೂಟ್ ನಿಗದಿಪಡಿಸಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಇಷ್ಟೊತ್ತಿಗೆ ಈ ಭಾಗದ ಜನರು ಸಹ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಉಡಾನ್ ಯೋಜನೆಯ ವಿಮಾನ ಹಾರಾಟಕ್ಕೆ ಇನ್ನೂ ಕಾಲವೇ ಕೂಡಿಬರುತ್ತಿಲ್ಲ.
ಉಡಾನ್ ಯೋಜನೆಯ ಅನುಷ್ಠಾನಕ್ಕೆ ಕೊಪ್ಪಳ ತಾಲೂಕಿನ ಬಸಾಪುರ ಬಳಿ ಇರುವ ಎಂಎಸ್ಪಿಎಲ್ನ ಖಾಸಗಿ ಏರ್ಪೋರ್ಟ್ ಬಳಸಿಕೊಂಡು ವಿಮಾನ ಹಾರಾಟ ಆರಂಭಕ್ಕೆ ಜಿಲ್ಲಾಡಳಿತ ಮಾಡಿದ ಪ್ರಯತ್ನ ಫಲ ನೀಡಿಲ್ಲ. ಎಂಎಸ್ಪಿಎಲ್ ಕಂಪನಿಯ ಹಲವಾರು Terms and Condition ನಿಂದಾಗಿ ಈ ಏರ್ಪೋರ್ಟ್ಗಳನ್ನು ಬಳಸಿಕೊಂಡು ಉಡಾನ್ ಯೋಜನೆ ಅನುಷ್ಠಾನ ಮಾಡುವ ಯೋಚನೆಯನ್ನು ಕೈಬಿಟ್ಟಿದೆ. ಇದರಿಂದಾಗಿ ನಾಲ್ಕು ವರ್ಷದ ಬಳಿಕವೂ ಕೊಪ್ಪಳದಲ್ಲಿ ಉಡಾನ್ ಯೋಜನೆಯ ವಿಮಾನ ಹಾರಾಟಕ್ಕೆ ಇನ್ನೂ ಕಾಲಕೂಡಿ ಬರದಂತಾಗಿದೆ.
ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಯೋಚನೆಯನ್ನು ಸಂಸದ ಸಂಗಣ್ಣ ಕರಡಿ ಸೇರಿದಂತೆ ಜನಪ್ರತಿನಿಧಿಗಳು ಮಾಡಿದ್ದಾರೆ. ಈಗಾಗಲೇ ಕೊಪ್ಪಳ ತಾಲೂಕಿನ ಟಣಕನಕಲ್ ಬಳಿ ಭೂಮಿಯನ್ನು ಗುರತಿಸಲಾಗಿದ್ದು, ಕನಿಷ್ಠ 300 ಎಕರೆ ಭೂಮಿ ಬೇಕು. ಅದನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು, ವಿಮಾನ ನಿಲ್ದಾಣಕ್ಕೆ ಕೆಕೆಆರ್ಡಿಬಿ ಇಂದ ಸುಮಾರು ನೂರು ಕೋಟಿ ರೂಪಾಯಿ ನೀಡುವುದಾಗಿ ಕೆಕೆಆರ್ಡಿಬಿ ಅಧ್ಯಕ್ಷರು ಹೇಳಿದ್ದಾರೆ.
ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತೆ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದ್ದಾರೆ. ನಾಲ್ಕು ವರ್ಷವಾದರೂ ಕೊಪ್ಪಳದಲ್ಲಿ ಉಡಾನ್ ಯೋಜನೆ ಅನುಷ್ಠಾನವಾಗದೆ ಇರುವುದರಿಂದ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಸಮಾನ ಮನಸ್ಕರು ಇತ್ತೀಚೆಗೆ ಸಮಿತಿ ರಚಿಸಿಕೊಂಡು ಗಮನ ಸೆಳೆದಿದ್ದರು. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು, ಪ್ರವಾಸಿ ತಾಣಗಳು, ಅನೇಕ ಉದ್ಯಮಗಳು, ವ್ಯಾಪಾರ ವಹಿವಾಟು ಕೇಂದ್ರಗಳಿವೆ. ಇಲ್ಲಿ ಉಡಾನ್ ಯೋಜನೆಯ ಅನುಷ್ಠಾನ ಅತ್ಯಂತ ಅಗತ್ಯವಾಗಿದೆ.
ಶಾಶ್ವತ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಯತ್ನದ ನಡುವೆಯೂ ಅವಕಾಶವಿರುವುದನ್ನು ಬಳಸಿಕೊಂಡು ಉಡಾನ್ ಯೋಜನೆಯನ್ನು ಆದಷ್ಟು ಶೀಘ್ರ ಅನುಷ್ಠಾನ ಮಾಡಬೇಕು. ಕೊರೊನಾ ಸೋಂಕಿನ ಭೀತಿ ಹಿನ್ನೆಲೆ, ನಾವು ಇಷ್ಟು ದಿನ ಸುಮ್ಮನೆ ಇದ್ದೆವು.
ಈಗ ಲಾಕ್ಡೌನ್ ಸಡಿಲಿಕೆಯಾಗಿದ್ದು, ನಮ್ಮ ಸಮಾನ ಮನಸ್ಕ ಸಮಿತಿಯಿಂದ ಉಡಾನ್ ಯೋಜನೆಯ ಅನುಷ್ಠಾನ ಮಾಡುವುದಕ್ಕೆ ಒತ್ತಾಯ ಮಾಡುತ್ತೇವೆ ಎಂದು ಸಮಿತಿಯ ಮುಖಂಡ ಹಾಗೂ ನ್ಯಾಯವಾದಿ ಆರ್.ಬಿ. ಪಾನಘಂಟಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಉಡಾನ್ ಯೋಜನೆ ಇನ್ನೇನು ಆರಂಭವಾಗುತ್ತದೆ ಎಂಬ ಜನರ ಕನಸು ಈಗ ಭಗ್ನಗೊಂಡಿದೆ.