ಕೊಪ್ಪಳ : ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆಗಾಗಿ ಆರೋಗ್ಯಕರ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಗುಂಪು ಸೇರಬಾರದು ಎಂಬ ನಿಯಮ ಕೊಪ್ಪಳದಲ್ಲಿ ಉಲ್ಲಂಘನೆಯಾಗಿದೆ.
ನಗರದ ಪ್ರವಾಸಿ ಮಂದಿರಕ್ಕೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಜಮಾಯಿಸಿದ್ದರು. ಸಾಮಾಜಿಕ ಅಂತರ ಮರೆತು ಅಲ್ಲಿ ಕಾರ್ಯಕರ್ತರು ಗಿಜಿಗುಡುತ್ತಿದ್ದರು. ಆರೋಗ್ಯಕರ ಅಂತರಕ್ಕೆ ಡೋಂಟ್‌ಕೇರ್ ಅಂದ ಕಾರ್ಯಕರ್ತರಿಗೆ ಸ್ಥಳದಲ್ಲಿದ್ದ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ.
ಸುದ್ದಿಗೋಷ್ಠಿ ನಡೆಸುವಾಗಲೂ 50ಕ್ಕೂ ಹೆಚ್ಚು ಕಾರ್ಯಕರ್ತರು ಸಿದ್ದರಾಮಯ್ಯ ಸುತ್ತಮುತ್ತ ಅಂಟಿಕೊಂಡೆ ನಿಂತಿದ್ದರು. ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಉಪದೇಶ ಮಾಡಿದರು. ಆದರೆ, ಅವರ ಸುತ್ತಮುತ್ತವೇ ಕಾರ್ಯಕರ್ತರು ಪಕ್ಕ ಪಕ್ಕದಲ್ಲೇ ನಿಂತಿದ್ರೂ ಅದನ್ನು ಗಮನಿಸಲಿಲ್ಲ. ಇದು ಸಾರ್ವಜನಿಕರ ಹಾಗೂ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಸಾಮಾನ್ಯ ಜನರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೆ ಒಂದು ನ್ಯಾಯವೇ? ಎಂದು ಪ್ರಗತಿಪರ ಸಂಘಟನೆಗಳ ಮುಖಂಡ ಬಸವರಾಜ ಶೀಲವಂತರ ಪ್ರಶ್ನಿಸಿದ್ದಾರೆ.