ಮೈಸೂರು: ನಗರದ ಪ್ರಿನ್ಸಸ್ ರಸ್ತೆಯ ಹೆಸರು ಬದಲಾವಣೆ ವಿಚಾರ ಮುನ್ನೆಲೆಗೆ ಬಂದಾಗಿನಿಂದಲೂ ಸಿಎಂ ಸಿದ್ದರಾಮಯ್ಯ ಜಾಣ ಮೌನ ತಾಳಿದ್ದಾರೆ. ಈಗ ರಸ್ತೆಗಿರುವ ರಾಜಮನೆತನದ ಹೆಸರನ್ನು ತೆಗೆಯುವ ಬದಲು ಮುಡಾದ ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯ ಹೆಸರನ್ನಿಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ನಾವು ಆ ರಸ್ತೆಗೆ ಹೆಸರಿಡಿ, ಈ ರಸ್ತೆಗೆ ಹೆಸರಿಡಿ ಎಂದು ಹೇಳುವ ಬದಲು ಜನರ ಹೃದಯದಲ್ಲಿ ಇರಬೇಕು ಎಂದರು.
ಸರ್ಕಾರದಿಂದ ಲೂಟಿ: ಬಸ್ ಪ್ರಯಾಣ ದರ ಹೆಚ್ಚಳದಿಂದ ಮಂತ್ರಿಗಳು ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಜನರಿಗೆ ಹೊರೆ ಹೊರಿಸಿ ಆನಂದ ಪಡುವ ಸರ್ಕಾರ ಇದು. ಈ ಸರ್ಕಾರ ದರ ಏರಿಕೆಯ ಮೂಲಕ ಜನರ ಜೇಬಿಗೆ ಕೈ ಹಾಕಿ ಲೂಟಿ ಮಾಡುತ್ತಿದೆ. ಜನರಿಗೆ ಕಷ್ಟಕೊಟ್ಟು ಖುಷಿ ಪಡುವ ಸರ್ಕಾರ ಇದು ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಇಬ್ಬರು ಮಹಾನ್ ವ್ಯಕ್ತಿಗಳು ಸಹಿ ಹಾಕಿದ್ದಾರೆ. ಅದರಲ್ಲಿ ಒಬ್ಬರು ಮನಮೋಹನ್ ಸಿಂಗ್ ಅವರ ಬಳಿಕ ದೊಡ್ಡ ಆರ್ಥಿಕ ತಜ್ಞರಾದ ಸಿದ್ದರಾಮಯ್ಯ ಅವರು. ಮತ್ತೊಬ್ಬರ ಬಗ್ಗೆ ಹೇಳಬೇಕಿಲ್ಲ ಎಂದ ಅವರು, ಈಗ ಆಶ್ರಯ ಮನೆಗಳಿಗೂ ವಸೂಲಿ ಶುರುವಾಗಿದೆ. ಒಂದೊಂದು ಆಶ್ರಯ ಮನೆಗಳಿಗೂ 12 ಸಾವಿರ ವಸೂಲಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಆರೋಪಿಸಿದರು.
ನಮ್ಮಲ್ಲಿ 18 ಜನ ಶಾಸಕರಿದ್ದಾರೆ. ಎಲ್ಲರೂ ಒಟ್ಟಾಗಿದ್ದಾರೆ. ಅದನ್ನೇ ಹರೀಶ್ ಗೌಡ ಹೇಳಿದ್ದಾರೆ. ಬೆಳಗಾವಿಯಲ್ಲಿ ಎಲ್ಲಾ ಶಾಸಕರು ಕೂತು ಮಾತನಾಡಿದ್ದಾರೆ. ನಮ್ಮ ಶಾಸಕರು ನಮ್ಮ ಜತೆ ಇರುತ್ತಾರೆ. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ಆಯ್ಕೆ ಬಗ್ಗೆ ಬರುತ್ತಿರುವ ಸುದ್ದಿಗಳು ಕೇವಲ ಮಾಧ್ಯಮಗಳ ಸೃಷ್ಟಿ. ನಮ್ಮಲ್ಲಿ ಆ ವಿಚಾರ ಇನ್ನೂ ಚರ್ಚೆಯಾಗಿಲ್ಲ ಎಂದರು.
ನಾವಿಬ್ಬರೂ ಗಂಡ - ಹೆಂಡತಿ ಥರ: ಶಾಸಕ ಜಿ.ಟಿ.ದೇವೇಗೌಡರ ಜತೆಗಿನ ಮುನಿಸಿನ ಬಗ್ಗೆ ಪ್ರತಿಕ್ರಿಯಿಸಿ, ಮನೆ ಎಂದ ಮೇಲೆ ಇದೆಲ್ಲಾ ಇದ್ದೇ ಇರುತ್ತದೆ. ನಾವಿಬ್ಬರೂ ಗಂಡ - ಹೆಂಡತಿ ಥರ ಜಗಳವಾಡುತ್ತೇವೆ, ಮತ್ತೇ ಒಂದಾಗುತ್ತೀವಿ. ಅದರಲ್ಲಿ ವಿಶೇಷತೆ ಏನು ಇಲ್ಲ. ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರು ಬಾಯಿಗೆ ಬಂದಂತೆ ಮಾತನಾಡುವುದಲ್ಲ, ಲಗಾಮು ಇರಲಿ: ಪ್ರಿಯಾಂಕ್ ಖರ್ಗೆ