ಗಂಗಾವತಿ: ವಿಘ್ನ ನಿವಾರಕ ವಿನಾಯಕನಿಗೆ ಸರ್ವತ್ರ ಮೊದಲ ಪೂಜೆ ಸಲ್ಲಿಸುವುದು ಹಿಂದೂಗಳ ವಾಡಿಕೆ. ಆದರೆ ಗಣೇಶ ಹಬ್ಬವನ್ನು ಮುಸ್ಲಿಂ ಕುಟುಂಬವೊಂದು ಆಚರಿಸುವ ಮೂಲಕ ಗಮನ ಸೆಳೆಯುತ್ತಿದೆ.
ನಗರದ 23ನೇ ವಾರ್ಡ್ ಗುಂಡಮ್ಮ ಕ್ಯಾಂಪಿನಲ್ಲಿರುವ ಕೆ. ಹುಸೇನಸಾಬ ಹಾಗೂ ಹುಸೇನಬಿ ಎಂಬ ದಂಪತಿ ವಿನಾಯನ ಆರಾಧಿಸುವ ಮೂಲಕ ಗಮನ ಸೆಳೆಯುತ್ತಿದೆ. ಪ್ರತಿವರ್ಷ ಈ ಕುಟುಂಬ ಗಣೇಶ ಚತುರ್ಥಿಯೆಂದು ಮನೆಯಲ್ಲಿ ಹಿಂದೂಗಳಂತೆ ಸಂಪ್ರದಾಯ ಬದ್ಧವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಬಳಿಕ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡುವ ಮೂಲಕ ಹಬ್ಬವನ್ನು ಇಡೀ ಕುಟುಂಬ ಸದಸ್ಯರು ಆಚರಿಸುತ್ತಾರೆ.
ಮುಸ್ಲಿಂ ಸಮುದಾಯದ ಪಿಂಜಾರ ನದಾಫ್ ವರ್ಗಕ್ಕೆ ಸೇರಿದ ಈ ಕುಟುಂಬ, ಕಳೆದ ಹಲವು ವರ್ಷದಿಂದ ಹಿಂದೂ ಸಂಪ್ರದಾಯ, ಸಂಸ್ಕೃತಿಯಂತೆ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವುದು ವಿಶೇಷವಾಗಿದೆ.