ಗಂಗಾವತಿ(ಕೊಪ್ಪಳ): ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಹಿಂದೂಗಳ ಶ್ರದ್ಧಾ ಮತ್ತು ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಗೆ ಶುಕ್ರವಾರ ಮುಸ್ಲಿಂ ಕುಟುಂಬವೊಂದು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿತು. ಈ ಮೂಲಕ ನಂಬಿಕೆ ಮತ್ತು ಭಾವನೆಗಳಿಗೆ ಧರ್ಮ-ಜಾತಿಯ ಸೋಂಕಿಲ್ಲ ಎಂಬುವುದನ್ನು ಈ ಕುಟುಂಬ ಸಾರಿ ಹೇಳಿತು.
ಹನುಮಮಾಲೆ ವಿರಮಣ ಸಂದರ್ಭದಲ್ಲಿ ವಿಜಾಪುರ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ಮಾಲಾಧಾರಣೆ ಮಾಡಿಕೊಂಡು ಇಲ್ಲಿಗೆ ಬಂದು ಮಾಲೆ ವಿರಮಣ ಮಾಡಿದ ಬೆನ್ನಲ್ಲೆ ಮುಸ್ಲಿಂ ಕುಟುಂಬವೊಂದು ಹರಕೆ ಹೊತ್ತು ಅಂಜನಾದ್ರಿಗೆ ಆಗಮಿಸುವ ಮೂಲಕ ಗಮನ ಸೆಳೆದಿದೆ. ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದಿಂದ ಆಗಮಿಸಿ ಸುಮಾರು ಎಂಟು ಜನರ ಮುಸ್ಲಿಂ ಕುಟುಂಬ 589 ಮೆಟ್ಟಿಲುಗಳನ್ನು ಭಕ್ತಿಯಿಂದ ಏರಿತು. ಬಳಿಕ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿತು.
ಕುಟುಂಬದ ಕೆಲವರು ಬುರ್ಖಾ ಧರಿಸಿಕೊಂಡು ಬಂದಿದ್ದರು. ಆದರೆ, ದೇಗುಲದ ಆಡಳಿತ ಮಂಡಳಿಯ ಈ ಮುಸ್ಲಿಂ ಮಹಿಳೆಯರಿಗೆ ಯಾವುದೇ ಅಡೆತಡೆ ಮಾಡದೇ ದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿತ್ತು. ಕುಟಂಬದವರು ಮಾಧ್ಯಮದ ಪ್ರತಿನಿಧಿಗಳ ಜೊತೆ ಮಾತನಾಡಲು ಇಚ್ಛಿಸಲಿಲ್ಲ.
ಇದನ್ನೂ ಓದಿ:ಕಾವಿ ಬಟ್ಟೆ, ಮಾಲೆ ಧರಿಸಿ ಅಂಜನಾದ್ರಿಗೆ ಬಂದು ಭಾವೈಕ್ಯತೆ ಸಾರಿದ ಮುಸ್ಲಿಂ ಭಕ್ತ