ಗಂಗಾವತಿ: ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯ ಮನೋಹರಸ್ವಾಮಿ ಅವರ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕುಟುಂಬ ಸದಸ್ಯರು ಪೊಲೀಸರಿಗೆ ಮನವಿ ಸಲ್ಲಿಸಿದರು.
ಉದ್ಯಮಿ ಶಶಿಧರ ಸ್ವಾಮಿ ನೇತೃತ್ವದಲ್ಲಿ ನಗರ ಠಾಣೆಗೆ ಆಗಮಿಸಿದ ಸುಮಾರು 50ಕ್ಕೂ ಹೆಚ್ಚು ಕುಟುಂಬ ಸದಸ್ಯರು, ಪ್ರಕರಣದಲ್ಲಿನ ಇತರೆ ಆರೋಪಿಗಳನ್ನು ಬಂಧಿಸಿ ತಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಸದಸ್ಯ ಮನೋಹರಸ್ವಾಮಿ ಅವರ ಪತ್ನಿ ಪೂಜಾ, ಅಪಹರಣದ ಸಂದರ್ಭದಲ್ಲಿ ತನ್ನ ಪತಿಗೆ ಏನಾದರೂ ಆಗಿದ್ದರೆ ಅದಕ್ಕೆ ಯಾರು ಹೊಣೆ ಹೊರುತ್ತಿದ್ದರು..? ನಮ್ಮ ಕುಟುಂಬವನ್ನು ಈ ಪ್ರಕರಣದ ಆರೋಪಿಗಳು ಸಲಹುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ನಗರಠಾಣೆಯ ಪಿಐ ವೆಂಕಟಸ್ವಾಮಿಗೆ ಮನವಿ ಸಲ್ಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಅವರನ್ನು ಬಂಧಿಸುವವರೆಗೂ ಕುಟುಂಬ ಸಮೇತ ಠಾಣೆಯ ಆವರಣದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.