ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ ವ್ಯಾಪ್ತಿಯ ಬನ್ನಿಕಟ್ಟೆ ಸಂತೆ ಮೈದಾನದಲ್ಲಿ ಅನಧಿಕೃತವಾಗಿ ಬಳಕೆಯಲ್ಲಿದ್ದ ಹತ್ತು ಮಳಿಗೆಗಳಿಗೆ ಬುಧವಾರ ಬೆಳ್ಳಂಬೆಳಗ್ಗೆ ಬೀಗ ಜಡಿಯಲಾಯಿತು.
ಪುರಸಭೆ ಮುಖ್ಯಾಧಿಕಾರಿ ಉಮೇಶ ಕೆ. ಹಿರೇಮಠ ನೇತೃತ್ವದಲ್ಲಿ ಸಂತೆ ಮೈದಾನ ಹಾಗೂ ರಸ್ತೆ ಪಕ್ಕದಲ್ಲಿ ಕೋವಿಡ್ ಭಯವಿಲ್ಲದೇ ಸಾಮಾಜಿಕ ಅಂತರ ಮರೆತು ಕಾಯಿಪಲ್ಲೆ ಮಾರುತ್ತಿದ್ದದ್ದನ್ನು ಬಂದ್ ಮಾಡಿಸಿ, ತಳ್ಳುಗಾಡಿಯಲ್ಲಿ ಕಾಯಿಪಲ್ಲೆ ಮನೆ ಮನೆಗೆ ಮಾರಲು ಬಲವಂತವಾಗಿ ಕಳುಹಿಸುವ ಕಾರ್ಯಾಚರಣೆ ನಡೆಯಿತು.
ಇದೇ ವೇಳೆ ಪುರಸಭೆ ಅಧೀನದ 10 ವಾಣಿಜ್ಯ ಮಳಿಗೆಗಳನ್ನು ಅನಧಿಕೃತವಾಗಿ ಕಾಯಿಪಲ್ಲೆ ಸಂಗ್ರಹಕ್ಕೆ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ಮಳಿಗೆಗಳಿಗೆ ಬೀಗ ಜಡಿಯಲಾಯಿತು. ಆರಂಭದಲ್ಲಿ ಸದರಿ ಮಳಿಗೆಗಳಿಂದ ಕಾಯಿಪಲ್ಲೆ ಹೊರ ಸಾಗಿಸಲು ಹಿಂಜರಿದ ವ್ಯಾಪಾರಸ್ಥರು, ಬೀಗ ಜಡಿಯಲು ಮುಂದಾಗುತ್ತಿದ್ದಂತೆ ಮಳಿಗೆಗಳಲ್ಲಿದ್ದ ಕಾಯಿಪಲ್ಲೆ ಹೊರ ಸಾಗಿಸಿದರು.