ಕೊಪ್ಪಳ: ರಸ್ತೆ ವಿಭಜಕಕ್ಕೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಮಗ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಮಂಗಳಾಪುರದ ಬಳಿ ಜರುಗಿದೆ. ಮಂಗಳಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದ ದುರ್ಘಟನೆಯಲ್ಲಿ ರೇಣುಕಮ್ಮ( 50), ಪ್ರಭು(25) ಮೃತಪಟ್ಟಿದ್ದಾರೆ. ಕೊಪ್ಪಳದ ತೆಗ್ಗಿನಕೇರಿ ನಿವಾಸಿಗಳಾದ ಇವರು ಕುಕನೂರಿನಿಂದ ಕೊಪ್ಪಳಕ್ಕೆ ಆಗಮಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಾಹನದಲ್ಲಿದ್ದ 9 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೊಪ್ಪಳದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ವಾಹನ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದ್ದು, ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಕರ ರಸ್ತೆ ಅಪಘಾತದಲ್ಲಿ 6 ಜನರ ಸಾವು: ಇತ್ತೀಚಿಗೆ ಲಾರಿ ಮತ್ತು ಇಂಡಿಕಾ ಕಾರು ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ವರದಿಯಾಗಿತ್ತು. ಕಾರಿನ ಟೈರ್ ಸ್ಫೋಟಗೊಂಡು ದುರಂತ ಸಂಭವಿಸಿತ್ತು. ರಾಜಪ್ಪ ಬನಗೋಡಿ (40), ರಾಘವೇಂದ್ರ ಕಾಂಬಳೆ (24), ಅಕ್ಷಯ ಶಿವಶರಣ (21), ಜಯಶ್ರೀ (26), ಚಿಕ್ಕ ಮಕ್ಕಳಾದ ರಾಕಿ (4) ಹಾಗೂ ರಕ್ಷಿತಾ (2) ಎಂಬುವವರೇ ಮೃತರಾಗಿದ್ದರು.
ಮೃತರೆಲ್ಲರೂ ಕಾರಿನಲ್ಲಿ ವಿಜಯಪುರಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರಿನ ಟೈರ್ ಸ್ಫೋಟಿಸಿತ್ತು. ಪರಿಣಾಮ ಇನ್ನೊಂದು ಬದಿಯ ರಸ್ತೆಗೆ ಬಂದು ಲಾರಿಗೆ ಕಾರು ಡಿಕ್ಕಿ ಹೊಡೆದಿತ್ತು. ಲಾರಿ ವೇಗವಾಗಿ ಚಲಿಸುತ್ತಿದ್ದರಿಂದ ಕಾರು ಸಂಪೂರ್ಣ ಲಾರಿಯ ಕೆಳಗಡೆ ನುಸುಳಿತ್ತು. ಕಾರಿನಿಂದ ಮೃತದೇಹಗಳನ್ನು ಹೊರಗಡೆ ತೆಗೆಯಲು ಸ್ಥಳಿಯರು ಹರಸಾಹಸ ಪಡಬೇಕಾಯಿತು. ಅಲ್ಲದೇ, ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಿರಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕಾರಿನ ಚಾಲಕನ ನಿರ್ಲಕ್ಷತನದಿಂದ ಈ ದುರ್ಘಟನೆ ಸಂಭವಿಸಿತ್ತು. ಇಳಕಲ್ ಕಡೆಗೆ ಈ ಲಾರಿ ಹೊರಟಿತ್ತು. ಡಿಕ್ಕಿ ಹೊಡೆದ ರಭಕ್ಕೆ ಲಾರಿಯ ಮುಂಭಾಗದಲ್ಲಿ ಕಾರು ಸಿಲುಕಿಕೊಂಡಿತ್ತು. ಇದರಿಂದ ಕಾರನ್ನು ಓರಿಟಿಲ್ ಕಂಪನಿಗೆ ಸೇರಿದ ವಾಹನದ ಮೂಲಕ ಹೊರ ತೆಗೆಯಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ, ಇದು ವಿಫಲವಾದ ಹಿನ್ನೆಲೆಯಲ್ಲಿ ಕ್ರೇನ್ ಮೂಲಕ ಕಾರನ್ನು ಹೊರ ತೆಗೆಯಲಾಯಿತು. ಎಲ್ಲ ಮೃತ ದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪರಿಹಾರ ಘೋಷಿಸಿದ್ದ ಸಿಎಂ: ಈ ದುರಂತದಲ್ಲಿ ಮೃತ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಳೆಯ ಮಕ್ಕಳು ಸೇರಿದಂತೆ 6 ಮಂದಿ ಸಾವಿಗೀಡಾದ ಸುದ್ದಿ ತಿಳಿದು ಎದೆ ನಲುಗಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತ ದುರ್ದೈವಿಗಳ ಕುಟುಂಬಕ್ಕೆ ಸರ್ಕಾರದಿಂದ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ.. 10 ಮಂದಿ ಸಾವು, ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ