ಕೊಪ್ಪಳ: ಅದು ಸದಾ ಶಿಸ್ತಿನಿಂದ ಓಡಾಡುವ ಬೂಟುಗಾಲಿನ ಸದ್ದೇ ಕೇಳುವ ಸ್ಥಳ. ಪ್ರತಿದಿನ ವಿಶ್ರಾಮ್, ಸಾವಧಾನ್ ಶಬ್ಧಗಳನ್ನು ಅನುರಣಿಸುವ ಆ ಕ್ಯಾಂಪಸ್ ಇದೀಗ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಇಡೀ ಕ್ಯಾಂಪಸ್ ಗಿಡ-ಮರ, ಸಸಿಗಳಿಂದ ಕಂಗೊಳಿಸುತ್ತಾ ಗಮನ ಸೆಳೆಯುತ್ತಿದೆ. ಹಾಗಾದ್ರೆ ಆ ಸ್ಥಳ ಯಾವುದು ಅಂತಿರಾ? ಈ ಸ್ಟೋರಿ ನೋಡಿ..
ಕೊಪ್ಪಳದಿಂದ ಹೊಸಪೇಟೆಗೆ ತೆರಳುವ ಮುನಿರಾಬಾದ್ ಹತ್ತಿರದಿಂದ ಹೆದ್ದಾರಿ ಪಕ್ಕದಲ್ಲಿ ವೃತ್ತಾಕಾರದ ಒಂದು ಕಟ್ಟಡ ಕಾಣಿಸುತ್ತದೆ. ಈ ಕಟ್ಟಡ ಅಲ್ಲಿ ಓಡಾಡುವ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತದೆ. ಅದೇ ಭಾರತೀಯ ಮೀಸಲು ಪಡೆ (ಐಆರ್ಬಿ) ಹಾಗೂ ಕೆಎಸ್ಆರ್ಪಿ ತರಬೇತಿ ಕ್ಯಾಂಪಸ್. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ಇಂಡಿಯನ್ ರಿಸರ್ವ್ ಬೆಟಾಲಿಯನ್ ಹಾಗೂ ಕೆಎಸ್ಆರ್ಪಿ ತರಬೇತಿ ಇಡೀ ಕ್ಯಾಂಪಸ್ ಇದೀಗ ಹಸಿರಿನಿಂದ ಕಂಗೊಳಿಸುತ್ತಿದೆ.
ಸುಮಾರು 164 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಕ್ಯಾಂಪಸ್ನಲ್ಲಿ ನಾನಾ ಬಗೆಯ ಸುಮಾರು 30 ಸಾವಿರಕ್ಕೂ ಹೆಚ್ಚು ಸಸಿಗಳು ನಳನಳಿಸುತ್ತಿವೆ. ಸಾವಿರಾರು ಸಸಿಗಳು ಮರಗಳಾಗಿ ಬೆಳೆದು ಅಂದವನ್ನು ಹೆಚ್ಚಿಸಿವೆ. ಬೆಟಾಲಿಯನ್ ಮುಖ್ಯಕಚೇರಿಯ ಮುಂದೆ ಹಾಗೂ ಸುತ್ತಮುತ್ತ ಇರುವ ಉದ್ಯಾವನ ಕ್ಯಾಂಪಸ್ಗೆ ಮೆರುಗು ನೀಡಿದೆ. ಒಂದು ಸಸಿಯನ್ನು ನೆಟ್ಟು ಅದನ್ನು ಪೋಷಣೆ ಮಾಡುವುದು ಕಷ್ಟ ಎಂಬಂತಹ ಸ್ಥಿತಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅಚ್ಚುಕಟ್ಟಾಗಿ ಪಾಲನೆ, ಪೋಷಣೆ ಮಾಡುತ್ತಿರುವ ಬೆಟಾಲಿಯನ್ ಸಿಬ್ಬಂದಿಯ ಶ್ರಮ ನಿಜಕ್ಕೂ ಮೆಚ್ಚುವಂತಹದ್ದು. ಮುಖ್ಯವಾಗಿ ಇಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ತೇಗದ ಗಿಡಗಳನ್ನು ನೆಡಲಾಗಿದೆ.
ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಯಲಾಗಿರುವ ಈ ತೇಗದ ಮರ ತೋಪು ಒಂದು ಕಾನನದ ಅನುಭವ ನೀಡುತ್ತದೆ. ಇಡೀ ಬೆಟಾಲಿಯನ್ ಕ್ಯಾಂಪಸ್ ಸುತ್ತು ಹಾಕಿದರೆ ಎಲ್ಲೋ ಒಂದು ಅದ್ಭುತ ಹಸಿರು ಕಾನನಕ್ಕೆ ಬಂದಿದ್ದೇವೆ ಎಂದು ಭಾಸವಾಗುತ್ತದೆ. ಇಡೀ ಕ್ಯಾಂಪಸ್ನಲ್ಲಿ ಸಾವಿರ ಸಸಿಗಳನ್ನು ನೆಟ್ಟು ಹಸರೀಕರಣ ಮಾಡಿರುವುದರ ಹಿಂದೆ ಅಲ್ಲಿನ ಅಧಿಕಾರಿ, ಸಿಬ್ಬಂದಿಯ ಶ್ರಮ ಬಹಳಷ್ಟಿದೆ. ಇನ್ನು ಈ ಕ್ಯಾಂಪಸ್ಗೆ ಭೇಟಿ ನೀಡಿದ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಇಲ್ಲಿನ ಹಸರೀಕರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಸಿನಿರಿನಿಂದ ಕಂಗೊಳಿಸುವ ಇಂಡಿಯನ್ ರಿಸರ್ವ್ ಬೆಟಾಲಿಯನ್ ಕ್ಯಾಂಪಸ್ ನೋಡುಗರ ಕಣ್ಮನ ಸೆಳೆಯುತ್ತದೆ. ಅಲ್ಲದೇ, ತಮ್ಮ ಕರ್ತವ್ಯದ ಜೊತೆಗೆ ಗಿಡಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆ ಮಾಡುತ್ತಿರುವ ಮುನಿರಾಬಾದ್ನಲ್ಲಿರುವ ಇಂಡಿಯನ್ ರಿಸರ್ವ್ ಬೆಟಾಲಿಯನ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.