ಕುಷ್ಟಗಿ (ಕೊಪ್ಪಳ): ಕೊರೊನಾದಿಂದ ಸತ್ತವರಿಗಿಂತ ಲಾಕ್ಡೌನ್ ಸಂದರ್ಭದಲ್ಲಿ ಹಸಿವಿನಿಂದ ಸತ್ತವರ ಸಂಖ್ಯೆಯೇ ಜಾಸ್ತಿಯಾಗಿದೆ. ಈ ಸೋಂಕು ಸಮುದಾಯಕ್ಕೆ ಹರಡಲು ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಡಿ ಹೆಚ್ ಪೂಜಾರ ಆರೋಪಿಸಿದ್ದಾರೆ.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ದೇವರಾಜ ಅರಸು ಸಮಾಧಿಯಿಂದ ರಾಜ್ಯವ್ಯಾಪಿ ಜನಜಾಗೃತಿ ಜಾಥಾದ ಸಾರ್ವಜನಿಕ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈಗಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೊರೊನಾ ವೈರಸ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಯಾವುದೇ ಸಮುದಾಯ ಮೀಸಲಾತಿ ವಿರುದ್ಧವಿಲ್ಲ. ಆದರೆ, ಸರ್ಕಾರದಿಂದ ಒಂದೆಡೆ ಮೀಸಲಾತಿ ವಿರುದ್ಧ ಎತ್ತಿ ಕಟ್ಟುವುದು, ಇನ್ನೊಂದೆಡೆ ಶಮನ ಮಾಡುವ ನಾಟಕೀಯ ಬೆಳವಣಿಗೆ ಆಗುತ್ತಿದೆ ಎಂದರು.
ಒಂದೆಡೆ ಅಪಾಯಕಾರಿ ಕಾನೂನು ಜಾರಿಯ ಸಂದರ್ಭದಲ್ಲಿ ಡ್ರಗ್ಸ್ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದರು. ಕೃಷ್ಣಾ ಮೇಲ್ದಂಡೆಯ ಎಸ್ಕೀಂ ಸಮರ್ಪಕವಾಗಿ ಜಾರಿಗೆಯಾಗಿಲ್ಲ. ಬಿಸ್ಕೀಂ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವುದು ಖಂಡನೀಯ ಎಂದರು.