ಕುಷ್ಟಗಿ: ಕೌದಿ ಹೊಲೆಯುವ (ಮೋಚಿಗೇರ ಸಮುದಾಯದ) ಮಹಿಳೆಯರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಪರಿಹಾರ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮೋಚಿಗಾರ ಸಮಾಜದಿಂದ ತಹಶೀಲ್ದಾರ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸಿದರು.
ಊರುಗಳಲ್ಲಿ ಚಿಂದಿ ಬಟ್ಟೆಯಿಂದ ಬಣ್ಣ ಬಣ್ಣದ ಕೌದಿಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿರುವ ಮೋಚಿಗಾರ ಸಮುದಾಯದ ಜನರು ಲಾಕಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಲತಲಾಂತರಗಳಿಂದ ನಂಬಿಕೊಂಡು ಬಂದಿರುವ ಈ ಕುಲ ಕಸುಬುದಾರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತರೆ ಕುಲ ಕಸುಬು ಸಮುದಾಯಗಳಿಗೆ ನೀಡಿದ ಪ್ಯಾಕೇಜ್ ಪರಿಹಾರವನ್ನು ತಮ್ಮ ಸಮುದಾಯಕ್ಕೂ ನೀಡುವಂತೆ ಮನವಿ ಮಾಡಿದ್ದಾರೆ.
ಲಾಕಡೌನ್ ಪರಿಣಾಮ ಕೌದಿ ಹೊಲಿಯುವವರ ಬದುಕು ಛಿದ್ರ ಛಿದ್ರವಾಗಿದೆ. ಹನುಮಸಾರಗ ಗ್ರಾಮವೊಂದರಲ್ಲಿಯೇ 250 ಕುಟುಂಬಗಳಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಸಮುದಾಯಕ್ಕೆ ಕನಿಷ್ಠ 10 ಸಾವಿರ ರೂ. ಪ್ಯಾಕೇಜ್ ಪರಿಹಾರ ನೀಡುವಂತೆ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.