ಕೊಪ್ಪಳ: ‘ಕೆಲವರು ತಾವು ಮಾಡಿದ ಹಗರಣಗಳಿಂದ ಪಾರಾಗಲು ನನ್ನ ವಿರುದ್ಧ ಹೈಕಮಾಂಡ್ಗೆ ದೂರು ನೀಡುವ ನಾಟಕವಾಡುತ್ತಿದ್ದಾರೆ. ಅವರಿಗೆ ದೈರ್ಯ ಇದ್ದರೆ ಮೊದಲು ಹಗರಣಗಳಿಂದ ಹೊರಗೆ ಬರಲಿ. ಅದು ಬಿಟ್ಟು ನನ್ನ ಮೇಲೆ ದೂರು ನೀಡಲು ಮುಂದಾಗಿರುವುದು ವಿಪರ್ಯಾಸ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.
ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ’’ನನ್ನ ವಿರುದ್ಧ ದೂರು ನೀಡುವವರು ಮೊದಲು ತಾವು ಏನೆಂದು ತಿಳಿದುಕೊಳ್ಳಬೇಕು. ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲು ಹೈಕಮಾಂಡ್ಗೆ ದೂರು ನೀಡುತ್ತಿದ್ದಾರೆ ಎಂದು ಕೆಲವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ರಾಜ್ಯ ಉಸ್ತುವಾರಿಗೆ ದೂರು ನೀಡುವುದಾಗಿ ಕೆಲವರು ಹೇಳುತ್ತಿದ್ದಾರೆ. ದೂರು ಕೊಟ್ಟರೆ ಬಹಳ ಸಂತೋಷ. ಉಸ್ತುವಾರಿಗೆ ಮಾತ್ರ ಯಾಕೆ, ಪಕ್ಷದ ಎಲ್ಲ ಹಿರಿಯರಿಗೂ ದೂರು ನೀಡಲಿ ಎಂದು ಹೇಳಿದರು.
ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ತಿಂಗಳಲ್ಲಿ ಪತನವಾಗಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ‘ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಕಿತ್ತಾಟ ಇಲ್ಲ. ಆಂತರಿಕ ಪ್ರಜಾಪ್ರಭುತ್ವ ಇದೆ. ಅದರಂತೆ ಮುಕ್ತವಾಗಿ ಮಾತನಾಡುತ್ತೇನೆ. ಬಿಜೆಪಿ ನಾಯಕರ ಹಾಗೆ ನಾಗಪುರದಿಂದ ನಿರ್ದೇಶನ ತೆಗೆದುಕೊಂಡು ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು. ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವನಾಥ್ ಸದ್ಯ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರಾ? ಎಂದು ಪ್ರಶ್ನಿಸುವ ಮೂಲಕ ಲೇವಡಿ ಮಾಡಿದರು.
ಸಿದ್ದು ವಿರುದ್ಧ ಹರಿಪ್ರಸಾದ್ ಪರೋಕ್ಷ ವಾಗ್ದಾಳಿ : ಕಳೆದೆರಡು ದಿನಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಹಿಂದುಳಿದ ವರ್ಗಗಳ ಸಮಾನಮನಸ್ಕರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಸಿಎಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಕೆಲವರು ಪಂಚೆ ಹಾಕಿಕೊಂಡು, ಹೂಬ್ಲೆಟ್ ವಾಚ್ ಹಾಕಿಕೊಂಡು ಸಮಾಜವಾದಿ ಎಂದರೆ ಆಗುವುದಿಲ್ಲ ಎಂದು ಟೀಕಿಸಿದ್ದರು.
ಹಿಂದಿನ ಯಾವ ಸಿಎಂಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಬಂಗಾರಪ್ಪ ಅವರು ಎಲ್ಲ ಕಾರ್ಯಕ್ರಮಗಳನ್ನು ರೂಪಿಸಿ ಎಲ್ಲ ಜಾತಿ, ಬಡವರಿಗೆ ಅನುಕೂಲ ಮಾಡಿದ್ದರು. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಯಾರೂ ಕೂಡ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪನವರು ಸಮಾಜವಾದಿ ಅಂದುಕೊಂಡು ಮಜಾವಾದಿಯಾಗಿರಲಿಲ್ಲ. ಸಮಾಜವಾದ ಅಂದರೆ ಎಲ್ಲರಿಗೂ ಸಮಾನವಾದ ಹಕ್ಕು ನೀಡುವುದಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಸಾಮಾನ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ : ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆ: ಸಿಎಂ ವಿರುದ್ಧ ಹರಿಪ್ರಸಾದ್ ಪರೋಕ್ಷ ವಾಗ್ದಾಳಿ