ಕೊಪ್ಪಳ(ಗಂಗಾವತಿ): ಸಿಎಂ ಯಡಿಯೂರಪ್ಪ ಅವರ ಆಡಳಿತ ವೈಖರಿ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ನಾನು ಭಿನ್ನಮತೀಯರ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂಬುದು ಶುದ್ಧ ಸುಳ್ಳು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಅತೃಪ್ತರ ಮನೆಯ ಔತಣಕೂಟಕ್ಕೆ ಹೋಗಿಲ್ಲ. ಕಳೆದ ನಾಲ್ಕು ದಿನಗಳಿಂದ ಗಂಗಾವತಿಯಲ್ಲೇ ಇದ್ದೇನೆ. ಇದೆಲ್ಲಾ ಸುಳ್ಳು ಸುದ್ದಿ. ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ. ನನಗೆ ಸಮಸ್ಯೆ ಏನೇ ಇದ್ದರೂ ಪಕ್ಷದಲ್ಲಿ ಆಂತರಿಕವಾಗಿ ಅಥವಾ ಹೈಕಮಾಂಡ್ನೊಂದಿಗೆ ಚರ್ಚಿಸುತ್ತೇನೆಯೇ ವಿನಃ ಪಕ್ಷಕ್ಕೆ ಮತ್ತು ಮುಖಂಡರಿಗೆ ಮುಜುಗುರವಾಗುವಂತೆ ವರ್ತಿಸುವುದಿಲ್ಲ ಎಂದರು.
ಸರ್ಕಾರ ರಚನೆಯ ಸಂದರ್ಭದಲ್ಲಿ ಸಹಜವಾಗಿ ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಸಾಮಾಜಿಕ ನ್ಯಾಯ, ಜಾತಿ, ಪ್ರಾದೇಶಿಕವಾರು ಲೆಕ್ಕಾಚಾರ, ಹಿರಿತನ ಇತ್ಯಾದಿಗಳ ಸಮೀಕರಣದ ಹಿನ್ನೆಲೆ ಸಚಿವ ಸಂಪುವನ್ನು ವರಿಷ್ಟರು ರಚಿಸಿದ್ದಾರೆ. ಮುಂದೆ ನನಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದರು.