ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಬಾದಾಮಿ ಕ್ಷೇತ್ರದ ಜನತೆಯಿಂದ ದೂರವಾಗಿದ್ದಾರೆ. ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು. ಕೊಪ್ಪಳದ ಮುನಿರಾಬಾದ್ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೆಸರನ್ನು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಕ್ಕೆ ಆಕ್ಷೇಪಿಸಿದ್ದಾರೆ. ಕಾರಣ ಅವರು ಬಾದಾಮಿ ಜನರಿಂದ ದೂರವಾಗಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಸುಮಾರು 1.20 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿನ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿದಾಗ ಎಷ್ಟು ಅನುದಾನ ನೀಡಿದ್ದರು ಎಂಬುದನ್ನು ಕಾಂಗ್ರೆಸ್ಸಿಗರು ಅವಲೋಕನ ಮಾಡಿಕೊಳ್ಳಬೇಕು. ನಮ್ಮ ಪ್ರಧಾನಿ ಗ್ರಾಮೀಣ ಜನರನ್ನು ಭೇಟಿಯಾಗಿದ್ದಾರೆ. ಇದನ್ನು ಸಹಿಸದ ಸಿದ್ದರಾಮಯ್ಯ ಅವರು ಸರಣಿ ಟ್ವಿಟ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಗ್ನಿಪಥ್ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಯುವಕರು ಸೇನೆಗೆ ಸೇರುವ ಮಹತ್ವದ ನಿರ್ಣಯ ಇದಾಗಿದೆ. ಅದನ್ನು ಅರಿಯದೇ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದರು.
ಮೈಸೂರಿನಲ್ಲಿ ಪ್ರಧಾನಿ ಮೋದಿ ಶ್ರೀರಾಮುಲು ಗಡ್ಡದ ಬಗ್ಗೆ ಹೊಗಳಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಅವರಿಗೆ ಮೊದಲಿನಿಂದಲೂ ಆತ್ಮೀಯ, ಹೀಗಾಗಿ ಅವರು ಗಡ್ಡದ ಬಗ್ಗೆ ಮಾತನಾಡಿದ್ದಾರೆ ಅಷ್ಟೇ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯರ ಟೀಕೆಗೆ ಯಾವುದೇ ಅರ್ಥವಿಲ್ಲ : ಮಾಜಿ ಸಿಎಂ ಜಗದೀಶ್ ಶೆಟ್ಟರ್