ಗಂಗಾವತಿ (ಕೊಪ್ಪಳ): ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನಕಗಿರಿ ಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ಎರೆಡೆರೆಡು ಬಾರಿ ಕೇವಲ ಪೂಜೆ ಮಾಡಲಾಗಿದೆ. ಆ ಕಾಮಗಾರಿಗಳು ಎಲ್ಲಿವೆ ಎಂದು ಈಗ ಹುಡುಕುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ವಕೀಲರ ಸಂಘದ ಮನವಿ ಹಿನ್ನೆಲೆ ಇದೇ ಮೊದಲ ಬಾರಿಗೆ ವಕೀಲರ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಿದರು. ಒಳಿಕ ಗಂಗಾವತಿಗೆ ಸಹಾಯಕ ಆಯುಕ್ತರ ಕಚೇರಿ ಆಗಬೇಕೆಂಬ ಕುರಿತು ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಕಾರಟಗಿ, ಗಂಗಾವತಿ ಭಾಗದ ಜನ ಸಿರುಗುಪ್ಪಾಕ್ಕೆ ಹೋಗಲು ಅನುಕೂಲವಾಗುತ್ತದೆ ಹಾಗೂ ಸುಮಾರು 27 ಕಿಲೋ ಮೀಟರ್ ಪ್ರಯಾಣದ ಅಂತರ ತಗ್ಗಲಿದೆ ಎಂಬ ಕಾರಣಕ್ಕೆ ನಂದಿಹಳ್ಳಿ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣ ಯೋಜನೆ ರೂಪಿಸಲಾಗಿತ್ತು. 2018 ರಿಂದ 2023ರ ವರೆಗೆ ಕನಕಗಿರಿ ಕ್ಷೇತ್ರದ ಈ ಹಿಂದಿನ ಶಾಸಕ ಎರಡೆರೆಡು ಬಾರಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಪೂಜೆ ಮಾಡಿದ್ದಾರೆ. ಕಾಮಗಾರಿ ಆರಂಭವಾಗಿಲ್ಲ ಎಂದರು.
ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ಭಾಗದಲ್ಲಿ ಭೂ ವ್ಯಾಜ್ಯಗಳು ಅಧಿಕವಾಗಿರುವ ಹಿನ್ನೆಲೆ ಈ ಮೂರು ತಾಲೂಕಿನ ಕಕ್ಷಿದಾರರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಗಂಗಾವತಿಯಲ್ಲಿ ಸಹಾಯಕ ಆಯುಕ್ತರ ಕೋರ್ಟ್ಗೆ ಗಂಗಾವತಿ ವಕೀಲರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಾಳೆಯೇ ಕೊಪ್ಪಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಗಂಗಾವತಿಗೆ ಪ್ರತ್ಯೇಕ ಎಸಿ ಕೋರ್ಟ್ ಸ್ಥಾಪನೆ ಮಾಡಬೇಕಾದರೆ ಅದಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವರು ಹೇಳಿದರು.
ಅಲ್ಲದೇ ಸಂಬಂಧಿತ ಕಾನೂನು ಸಚಿವರೊಂದಿಗೂ ಮಾತನಾಡಬೇಕಾಗುತ್ತದೆ. ಇದು ತಕ್ಷಣಕ್ಕೆ ಈಡೇರುವ ಬೇಡಿಕೆಯಲ್ಲವಾದ್ದರಿಂದ ತಾತ್ಕಾಲಿಕವಾದರೂ ವಾರಕ್ಕೆ ಎರಡ್ಮೂರು ದಿನ ಗಂಗಾವತಿಯಲ್ಲಿ ಭೂ ವ್ಯಾಜ್ಯಗಳ ನಡೆಸಲು ಸಂಚಾರಿ ಪೀಠ ಸ್ಥಾಪಿಸುವ ಸಂಬಂಧ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ಇದನ್ನೂ ಓದಿ: ನವವೃಂದಾವನ ಗಡ್ಡೆ ವಿವಾದ: ಏಕಸದಸ್ಯ ಪೀಠದ ತೀರ್ಪನ್ನು ತಳ್ಳಿಹಾಕಿದ ಹೈಕೋರ್ಟ್ ದ್ವಿಸದಸ್ಯ ಪೀಠ