ಕೊಪ್ಪಳ: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸಚಿವ ವೆಂಕಟರಾವ್ ನಾಡಗೌಡ ನಾಲಿಗೆ ಹರಿಬಿಟ್ಟಿದ್ದಾರೆ.
ಕೊಪ್ಪಳದ ಖಾಸಗಿ ಹೋಟೆಲ್ಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಮುಖಂಡರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಸಚಿವ ನಾಡಗೌಡ ಸುಮಲತಾ ಅಂಬರೀಶ್ ಅವರಿಗೆ ಆಕೆ, ಈಕೆ ಎಂಬ ಏಕವಚನದ ಪದ ಪ್ರಯೋಗಿಸಿದ್ದಾರೆ.
ಕುಮಾರಸ್ವಾಮಿ ಮಂಡ್ಯ ಚುನಾವಣೆಯಲ್ಲಿ ಸುಮಲತಾಳನ್ನು ಹತ್ತಿಕ್ಕುವುದು ಸಹಜ. ಸುಮಲತಾಳನ್ನು ಎತ್ತಿ ಮೇಲೆ ಕೂರಿಸಿ ಆಕೆಯನ್ನು ಗೆಲ್ಲಿಸಿ ಎಂದು ಹೇಳೋಕಾಗಲ್ಲ ಎಂದು ಏಕವಚನ ಪದ ಬಳಸುವ ಮೂಲಕ ಸುಮಲತಾ ಅಂಬರೀಶ್ ವಿರುದ್ಧ ಸಚಿವ ನಾಡಗೌಡನಾಲಿಗೆಹರಿಬಿಟ್ಟರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಗೌರವಕೊಡಿ. ನೀವು ಆಕೆ, ಈಕೆ ಎಂದು ಏಕವಚನದಲ್ಲಿ ಮಾತನಾಡಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳು ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಡಗೌಡ, ಇದು ನಮ್ಮ ಹಳ್ಳಿಭಾಷೆ, ಸ್ಥಳೀಯ ಭಾಷೆ. ನಮ್ಮಲ್ಲಿ ಆಕೆ, ಈಕೆ ಎಂದು ಮಾತನಾಡೋದು ಸಹಜವೆಂದು ಸಬೂಬು ನೀಡಿದ್ರು.
ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿಗೂ ಹೀಗೆ ಕರೀತಿರಾ ಎಂಬ ಪ್ರಶ್ನೆಗೆ ನಾಡಗೌಡ ಉತ್ತರ ನೀಡದೆ ಮೌನವಹಿಸಿದರು.