ಕೊಪ್ಪಳ: ಬಿಜೆಪಿಯವರಿಗಿಂತ ಕಾಂಗ್ರೆಸ್ ಪಕ್ಷದವರೇ ಹೆಚ್ಚಿಗೆ ದೇವಸ್ಥಾನಗಳಿಗೆ ಹೋಗ್ತಾರೆ. ನಾವು ನೇರವಾಗಿ ದೇವಸ್ಥಾನಕ್ಕೆ ಹೋದರೆ ಅವರು ಮರೆಯಲ್ಲಿ ಹೋಗುತ್ತಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ವ್ಯಂಗ್ಯವಾಡಿದರು.
ಕೊಪ್ಪಳದಲ್ಲಿ ಈ ಕುರಿತು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮೈಸೂರಿನಲ್ಲಿ ದೇವಸ್ಥಾನಗಳ ತೆರವು ಪ್ರಕರಣ ಕುರಿತಂತೆ ಪ್ರತಿಕ್ರಿಯಿಸುತ್ತಾ, ಸುಪ್ರಿಂಕೋರ್ಟ್ ಆದೇಶದಂತೆ ದೇವಸ್ಥಾನಗಳ ತೆರವು ಕಾರ್ಯಾಚರಣೆ ಮಾಡಲಾಗಿತ್ತು. ಇದು ಸರ್ಕಾರ ತೆಗೆದುಕೊಂಡ ನಿರ್ಧಾರವಲ್ಲ ಎಂದರು.
ಈ ಬಾರಿ ಶೇಕಡಾ 20 ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಸೊಳ್ಳೆಗಳು ಉತ್ಪತ್ತಿಯಾಗಿವೆ. ಇದರಿಂದಾಗಿ ಮಕ್ಕಳಲ್ಲಿ ವೈರಲ್ ಫೀವರ್ ಕಂಡುಬರುತ್ತಿದೆ. ಡೆಂಗ್ಯೂ ಸಹ ಕಂಡು ಬರುತ್ತಿದೆ. ಡೆಂಗ್ಯೂನಂತಹ ಕಾಯಿಲೆಗಳು ಮಕ್ಕಳಿಗಷ್ಟೇ ಅಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಸುಮಾರು ವರ್ಷಗಳಿಂದ ಇಂತಹ ಕಾಯಿಲೆಗಳು ಬರುತ್ತಿವೆ. ಆದರೆ, ಇದು ಮೂರನೇ ಅಲೆಯ ಮುನ್ಸೂಚನೆ ಅಲ್ಲ. ಇದಕ್ಕೂ ಕೊರೊನಾಗೆ ಲಿಂಕ್ ಮಾಡುವುದು ಬೇಡ. ಸಂಭಾವ್ಯ ಮೂರನೇ ಅಲೆ ಎದುರಿಸಲು ಕೊಪ್ಪಳ ಜಿಲ್ಲಾಡಳಿತ ಸಮರ್ಥವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು : ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೀನುಗಾರಿಕಾ ತೇಲುವ ಜಟ್ಟಿ ; 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ