ಗಂಗಾವತಿ: ಅಹಿಂದ ವರ್ಗ ಮಠಾಧೀಶರು ಒಂದೇ ವೇದಿಕೆಯಲ್ಲಿ ಎಲ್ಲರನ್ನು ಒಗ್ಗೂಡಿಸಿ ಹೋರಾಟ ಆರಂಭ ಮಾಡಿರುವುದು ಸಂತಸ ಸಂಗತಿ. ಇದು ಹಿಂದುಳಿದ ವರ್ಗಗಳ ನ್ಯಾಯೋಚಿತ ಹೋರಾಟಕ್ಕೆ ಸಿಕ್ಕ ಆಶಾದಾಯಕ ಬೆಳವಣಿಗೆ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಹೇಳಿದರು.
ಕನಕಗಿರಿ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಸಮೀಪದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ, ತಾಲ್ಲೂಕು ಕುರುಬರ ಸಂಘದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುರುಬ ಸಮಾಜ ಅಭಿವೃದ್ಧಿಯಾಗಬೇಕಿದೆ. ಶೈಕ್ಷಣಿಕ ಪ್ರಗತಿ ಮೂಲಕ ಗುರಿ ತಲುಪಲು ಸಾಧ್ಯ.
ಇತರೆ ಹಿಂದುಳಿದ ಸಮುದಾಯಗಳೊಂದಿಗೆ ಸೇರಿ ಸಾಂಘಿಕ ಹೋರಾಟ ಮಾಡಿದರೆ ಮಾತ್ರ ಇಡೀ ಹಿಂದುಳಿದ ಸಮುದಾಯ ಸಮಾಜಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಕುರುಬ ಸಮಾಜದಂತೆ ಅತ್ಯಂತ ಹಿಂದುಳಿದ ಇತರೆ ಸಮಾಜಗಳಿಗೂ ಆದ್ಯತೆ ಮೇರೆಗೆ ಎಸ್ಟಿ ಮೀಸಲಾತಿ ಕಲ್ಪಿಸಬೇಕಿದೆ. ಎಸ್ಸಿ ಅಥವಾ ಎಸ್ಟಿ ಮೀಸಲಾತಿ ಬೇಕೆನ್ನುವ ಜಾತಿಗಳು ಮೂಲ ಮೀಸಲಾತಿ ಜತೆಗೆ ಅಲ್ಲಿಗೆ ಹೋಗಬೇಕು, ಇಲ್ಲದಿದ್ದರೆ ಮೀಸಲಾತಿಯಲ್ಲಿರುವ ಜಾತಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಸಂವಿಧಾನದ ಆಶಯದಂತೆ ರಾಜಕೀಯ ಸ್ಥಾನ ಪೂರ್ಣ ಪ್ರಮಾಣದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ವರ್ಗದವರಿಗೆ ದೊರಕುತ್ತಿಲ್ಲ. ಅದನ್ನು ಪಡೆಯಲು ಎಲ್ಲಾ ಸಮುದಾಯಗಳು ನಿರಂತರ ಹೋರಾಟ ನಡೆಸುವ ಅಗತ್ಯ ಈಗ ಎದುರಾಗಿದೆ ಎಂದು ಅಭಿಪ್ರಾಯ ಪಟ್ಟರು. ಸಮಾಜದ ಪ್ರಮುಖರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.