ಕೊಪ್ಪಳ: ಮಂಗಳಮುಖಿಯನ್ನು ನಾಯಕಿಯನ್ನಾಗಿಸಿ ಮೂರನೇ ಕಣ್ಣು ಎಂಬ ಸಿನೆಮಾ ಮಾಡಿದ್ದ ಕೊಪ್ಪಳದ ನಿರ್ದೇಶಕ ಕೆ.ಎನ್. ನಜೀರ್ ನೇತೃತ್ವದ ಚಿತ್ರ ತಂಡದಿಂದ ಈಗ ಮತ್ತೊಂದು ಸಿನೆಮಾ ನಿರ್ಮಾಣ ಮಾಡಲಾಗ್ತಿದೆ.
ನಿರ್ದೇಶಕ ಕೆ.ಎನ್. ನಜೀರ್ ಹಾಗೂ ಅವರ ಚಿತ್ರತಂಡ ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ರದ ಟೈಟಲ್ ಬಿಡುಗಡೆ ಮಾಡಿದೆ. ಮೀರಾ ಚಿತ್ರದ ಮುಹೂರ್ತ ಜನವರಿಯಲ್ಲಿ ನಡೆಯಲಿದ್ದು, ಸುಮಾರು 60 ಲಕ್ಷ ರೂ. ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಲಾಗುತ್ತದೆ. ಚಿತ್ರ ನಾಯಕಿಯ ಆಯ್ಕೆ ನಡೆಯುತ್ತಿದೆ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ. ಅತ್ಯಾಚಾರ ಪ್ರಕರಣ ಹಾಗೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಯಾತನೆ ಕುರಿತ ಕಥಾ ಹಂದರ ಮೀರಾ ಚಿತ್ರ ಹೊಂದಿದೆ ಎಂದು ಚಿತ್ರತಂಡ ಹೇಳಿದೆ.
ಇನ್ನು ಉತ್ತರ ಕರ್ನಾಟಕದ ಪ್ರತಿಭೆಗಳು ತಯಾರಿಸಿದ ಚಲನಚಿತ್ರಗಳಿಗೆ ಬೆಂಗಳೂರಿನ ಗಾಂಧಿನಗರದಲ್ಲಿ ತಾತ್ಸಾರ ಮಾಡುತ್ತಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯೂ ಸಹ ಈ ಭಾಗದ ಚಿತ್ರಗಳು ಎಂದರೆ ದ್ವಿಮುಖ ನೀತಿ ಅನುಸರಿಸುತ್ತಿದೆ. ಕಷ್ಟಪಟ್ಟು ಚಿತ್ರ ಮಾಡಿರುತ್ತೇವೆ. ಇಲ್ಲಿನ ಪ್ರತಿಭೆಗಳನ್ನು ತುಳಿಯುವಂತಹ ಕೆಲಸ ವಾಣಿಜ್ಯ ಮಂಡಳಿ ಮಾಡುತ್ತಿದೆ ಎಂದು ಮೀರಾ ಚಿತ್ರದ ನಿರ್ಮಾಪಕ ಶಂಶುದ್ದೀನ್ ತಳಕಲ್ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಕೂಡಾ ಹೊರ ಹಾಕಿದರು.