ಗಂಗಾವತಿ(ಕೊಪ್ಪಳ): ತಾಲೂಕಿನ ಚಿಕ್ಕರಾಂಪೂರದ ಬಳಿ ಇರುವ ವಿಶ್ವ ವಿಖ್ಯಾತ ಧಾರ್ಮಿಕ ತಾಣ ಅಂಜನಾದ್ರಿ ದೇಗುಲಕ್ಕೆ ಕೇಂದ್ರದ ವಿದೇಶಾಂಗ ವ್ಯವಹಾರ ಮತ್ತು ಸಾಂಸ್ಕೃತಿಕ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.
ಕೇಂದ್ರ ಸಚಿವೆ ದೇಗುಲ ದರ್ಶನಕ್ಕೆ ಆಗಮಿಸುತ್ತಿರುವ ಮಾಹಿತಿ ಪಡೆದ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ ಸಚಿವರನ್ನು ಸ್ವಾಗತಿಸಿದರು. ಬಳಿಕ ಅಂಜನಾದ್ರಿ ದೇಗುಲದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ವಿವರಣೆ ನೀಡಿದರು. ಅಂಜನಾದ್ರಿಯಲ್ಲಿ ಥೀಮ್ ಪಾರ್ಕ್ ಸ್ಥಾಪಿಸುವ ಉದ್ದೇಶವಿದ್ದು, ಇದಕ್ಕಾಗಿ ಕೇಂದ್ರದಿಂದ ಪ್ರತ್ಯೇಕ ಒಂದು ನೂರು ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ಕೊಡಿಸುವಲ್ಲಿ ವಿಶೇಷ ಆಸಕ್ತಿ ವಹಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ ಮೀನಾಕ್ಷಿ ಲೇಖಿ, ಈ ಬಗ್ಗೆ ಸಂಬಂಧಿತ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ದೇಗುಲದಿಂದ ಸಚಿವೆಯನ್ನು ಶಾಲು ಹೊದಿಸಿ ಗೌರವಿಸಲಾಯಿತು. ಅಂಜನಾದ್ರಿ ದೇಗುಲದ ಬಳಿಕ ಇತಿಹಾಸದ ಹಿನ್ನೆಲೆ ಹೊಂದಿರುವ ಪಂಪಾ ಸರೋವರಕ್ಕೆ ಭೇಟಿ ನೀಡಿದ ಸಚಿವೆ ಜಯಲಕ್ಷ್ಮಿ ದೇಗುಲದ ದರ್ಶನವನ್ನೂ ಪಡೆದರು. ಆನೆಗೊಂದಿಯ ಪಾರಂಪರಿಕ ಅರಮನೆಗೂ ಇದೇ ಸಂದರ್ಭದಲ್ಲಿ ಭೇಟಿ ನೀಡಿದರು.
ಇದನ್ನೂ ಓದಿ : ಅಂಜನಾದ್ರಿಯೇ ಹನುಮನ ಜನ್ಮಸ್ಥಾನ, ಈ ಬಗ್ಗೆ ಘೋಷಣೆ ಅಗತ್ಯವಿಲ್ಲ : ಸಿಎಂ ಬೊಮ್ಮಾಯಿ