ಗಂಗಾವತಿ: ನಗರದ ಟಿಎಂಎಇ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದ್ದ ಕುವೆಂಪು ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಪದವಿ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆ ಈ ಪರೀಕ್ಷೆಯನ್ನು ರದ್ದು ಮಾಡುವಂತೆ ಕೊಪ್ಪಳ ಜಿಲ್ಲಾಧಿಕಾರಿಯವರು ಕುಲಸಚಿವರಿಗೆ ಪತ್ರ ಬರೆದಿದ್ದಾರೆ.
ನಗರದ ಟಿಎಂಎಇ ಕಾಲೇಜಿನಲ್ಲಿ ಫೆ.7 ರಿಂದ ಆರಂಭವಾಗಿ ಫೆ.18 ಕ್ಕೆ ಕೊನೆಗೊಂಡ ಪದವಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವ ಆರೋಪದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಬಿಇಒ ಸೋಮಶೇಖರಗೌಡ ಮತ್ತು ತಹಶಿಲ್ದಾರ್ ಚಂದ್ರಕಾಂತ್ ಎಲ್.ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ, ಅಕ್ರಮಕ್ಕೆ ಪೂರಕವಾದ ಸಾಕಷ್ಟು ಅಂಶಗಳು ಪತ್ತೆಯಾದ ಹಿನ್ನೆಲೆ ಈ ಬಗ್ಗೆ ಅವರು ಫೆ.11ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
ಬಿಇಒ ಮತ್ತು ತಹಶಿಲ್ದಾರ್ ಪತ್ರದ ಆಧಾರದ ಮೇಲೆ, ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದ್ದು, ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ನಡೆಸುವಂತೆ ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾನಿಲಯದ ದೂರ ಶಿಕ್ಷಣ ವಿಭಾಗದ ಕುಲಸಚಿವರು (ಮೌಲ್ಯಮಾಪನ) ಹಾಗೂ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ ಪತ್ರ ಬರೆದಿದ್ದಾರೆ.