ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮವಾಗಿ ಪೈಪಲೈನ್ ಹಾಕಿದ್ದು, ಕೆಳ ಭಾಗಕ್ಕೆ ನೀರು ಸರಿಯಾಗಿ ಸಿಗುತ್ತಿಲ್ಲ. ಕೂಡಲೇ ಅಕ್ರಮ ಪೈಪ್ಲೈನ್ ತೆರವು ಮಾಡಿಸಿ ಎಂದು ರಾಯಚೂರು, ಮತ್ತು ಮಾನ್ವಿ ಭಾಗದ ರೈತರು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರಿಗೆ ಮನವಿ ಮಾಡಿದರು.
ಗಂಗಾವತಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆಯ ನೇತೃತ್ವದಲ್ಲಿ ಭೇಟಿ ಮಾಡಿದ ರಾಯಚೂರು ಜಿಲ್ಲೆಯ ನಾನಾ ತಾಲೂಕುಗಳ ರೈತರು ಅನಧಿಕೃತ ಪೈಪ್ಲೈನ್ಗಳಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿವರಣೆ ನೀಡಿದರು. ಈ ಬಗ್ಗೆ ಮಾತನಾಡಿದ ಸಂಘಟನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ. ಈ ಹಿನ್ನೆಲೆ ಕೂಡಲೇ ನೀವು ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಂಡು ನೀರು ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಸುಮಾರು 6 ಲಕ್ಷ ಎಕರೆಗೆ ನೀರು ಒದಗಿಸಬೇಕಾದ ತುಂಗಭದ್ರಾ ಎಡದಂಡೆ ನಾಲೆಯ ಅಸಮರ್ಪಕ ನೀರು ನಿರ್ವಹಣೆಯಿಂದಾಗಿ ಮಾನ್ವಿ ಮತ್ತು ರಾಯಚೂರು ತಾಲೂಕುಗಳಿಗೆ ನೀರು ತಲುಪುತ್ತಿಲ್ಲ. 2 ಸಾವಿರ ಕೋಟಿ ಖರ್ಚು ಮಾಡಿದರೂ ಕೆಳ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ವಿವರಣೆ ನೀಡಿದರು. ರೈತರ ಮನವಿ ಮತ್ತು ಮೌಖಿಕ ವಿವರಣೆಯನ್ನು ಸುಮಾರು 20 ನಿಮಿಷ ಕಾಲ ಆಲಿಸಿದ ಜಿಲ್ಲಾಧಿಕಾರಿ ವಿಕಾಸ್, ಖಂಡಿತ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರೈತರ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ಕುಷ್ಟಗಿ, ನಾಗೇಂದ್ರ ಬಡಗಲಾಪುರ, ದೊಡ್ಡಬಸವನಗೌಡ ಬಲ್ಲಟಗಿ ಹಾಜರಿದ್ದರು.