ಕೊಪ್ಪಳ: ಅಪೌಷ್ಟಿಕತೆ ಹೊಂದಿರುವ ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರ ಕಾಳಜಿ ಅಗತ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 631 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಗರ್ಭಿಣಿ, ಬಾಣಂತಿಯರಿಗೆ ಈಗಾಗಲೇ ಇರುವ ಕಾರ್ಯಕ್ರಮಗಳ ಮೂಲಕ ಪೌಷ್ಟಿಕ ಆಹಾರ ನೀಡಲಾಗ್ತಿದೆ.
ಆದರೆ ಕೊರೊನಾ ಭೀತಿ ಹಿನ್ನೆಲೆ ಈ ಆಹಾರ ಸಾಮಾಗ್ರಿಗಳನ್ನು ನೀಡುವ ವಿಧಾನವಷ್ಟೆ ಬದಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗರ್ಭಿಣಿ ಮತ್ತು ಬಾಣಂತಿಯರ ಮನೆ ಬಾಗಿಲಿಗೆ ಪೌಷ್ಟಿಕ ಆಹಾರದ ಕಿಟ್ ನೀಡಲಾಗಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ. ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರಿಗೆ ನೀಡಲಾಗಿರುವ ಟೇಕಾಮ್ರೇಶನ್ ಹೆಸರಿನ ಈ ಕಿಟ್ ಪೂರಕ ಪೌಷ್ಟಿಕಾಂಶ ಆಹಾರಗಳಾದ ಮೊಟ್ಟೆ, ಹಾಲಿನ ಪುಡಿ, ವಿವಿಧ ಬೇಳೆಕಾಳು, ಬೆಲ್ಲ, ಸಕ್ಕರೆ, ಅಕ್ಕಿಯನ್ನು ಒಳಗೊಂಡಿದೆ.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ವಿಶೇಷವಾಗಿ ಆ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ, ಬೇಳೆಕಾಳು ನೀಡಲಾಗುತ್ತಿದೆ. ಇನ್ನು ಈ ಹಿಂದೆ ನೀಡುತ್ತಿದ್ದಂತೆ ಈಗಲೂ ಗರ್ಭಿಣಿ ಮಹಿಳೆಯರು ಹಾಗೂ ಬಾಣಂತಿಯರಿಗೆ ಕಿಟ್ ನೀಡಿದ್ದಾರೆ. ಅದರೆ ಕೊರೊನಾದಂತಹ ಇಂತಹ ಸಂದರ್ಭದಲ್ಲಿ ವಿಶೇಷವಾಗಿ ಏನು ನೀಡಿಲ್ಲ ಎನ್ನುತ್ತಾರೆ ಕೊಪ್ಪಳದ ಗಾಂಧಿ ನಗರದ ಮಹಿಳೆ ಮಂಜುಳಾ.