ಕೊಪ್ಪಳ: ಮಹರ್ಷಿ ವಾಲ್ಮೀಕಿ ಜಾತ್ರೆ ಅಂದ್ರೆ ಅದು ಕೇವಲ ಸಂಭ್ರಮ-ಸಡಗರ ಮಾತ್ರವಲ್ಲ. ಇವೆಲ್ಲದರ ಜೊತೆಗೆ ಸಾಂವಿಧಾನಿಕ ಹಕ್ಕುಗಳಿಗೆ ಆಗ್ರಹ ಮಾಡುವುದಾಗಿದೆ ಎಂದು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯ ನಾಲ್ಕನೇ ಅತಿದೊಡ್ಡ ಸಮುದಾಯವಾಗಿದೆ. ನಾಡು-ನುಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ಸ್ವಾತಂತ್ರ್ಯದ ನಂತರ ಸಮುದಾಯದ ಕುಲಕಸುಬು ಬೇಟೆಯಾಡುವುದು ಮೂಲೆಗುಂಪಾಗಿದೆ. ಬದಲಾದ ಸಾಮಾಜಿಕ ಸ್ಥಿತ್ಯಂತರಕ್ಕೆ ಸಮುದಾಯದ ಜನರು ಬದುಕನ್ನು ಒಗ್ಗಿಸಿಕೊಂಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮೀಸಲಾತಿ ನೀಡಿದ್ದಾರೆ. ಚುನಾವಣೆ ಬಂದಾಗ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಆಶ್ವಾಸನೆ ನೀಡಿ ಚುನಾವಣೆ ಬಳಿಕ ಮರೆತುಬಿಡುತ್ತಾರೆ. ಈ ದಿಸೆಯಲ್ಲಿ ಜಾಗೃತರಾಗಿ, ಸಂಘಟಿತರಾಗುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಐತಿಹಾಸಿಕ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯೂ ಮೂರನೇ ವರ್ಷದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಜಾತ್ರಾ ಮಹೋತ್ಸವಕ್ಕೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಸಮುದಾಯದ ಜನರನ್ನು ಆಹ್ವಾನಿಸಲಾಗುತ್ತಿದೆ ಎಂದರು.
ಓದಿ: ಚರಂಡಿ ಸ್ವಚ್ಛಗೊಳಿಸದ ಗ್ರಾಮ ಪಂಚಾಯತ್ಗೆ ಜನ ಬುದ್ಧಿ ಕಲಿಸಿದ್ದು ಹೀಗೆ - ವಿಡಿಯೋ
ಮೊದಲ ಹಂತದಲ್ಲಿ ಈಗಾಗಲೇ 58 ತಾಲೂಕುಗಳಲ್ಲಿ ಪ್ರವಾಸ ಮಾಡಲಾಗಿದೆ. 4 ಹಂತದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯದ ಜನರನ್ನು ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಹ್ವಾನಿಸಲಾಗುತ್ತದೆ. ಜಾತ್ರೆಯಲ್ಲಿ ಸಡಗರ-ಸಂಭ್ರಮದ ಜೊತೆಗೆ ನಮ್ಮ ಸಂವಿಧಾನಿಕ ಹಕ್ಕುಗಳಿಗಾಗಿ ಸರ್ಕಾರವನ್ನು ಆಗ್ರಹಿಸಲಾಗುತ್ತದೆ. ಸಮುದಾಯಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಶೇ. 7.5ರಷ್ಟು ಮೀಸಲಾತಿ ನೀಡಿದೆ. ಇದೇ ಮಾದರಿಯಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಈಗಿರುವ ಶೇ. 3 ರಿಂದ ಶೇ. 7.5 ಹೆಚ್ಚಿಸಲು ಆಗ್ರಹಿಸಲಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಈಗಾಗಲೇ ನಿವೃತ್ತ ನ್ಯಾಯಾಧೀಶ ನಾಗಮೋಹನದಾಸ್ ಅವರ ಆಯೋಗ ರಚಿಸಿದೆ. ಆಯೋಗವು ಸಹ ಈಗಾಗಲೇ 42 ಸಾರ್ವಜನಿಕ ಸಭೆ, ನಾಲ್ಕು ಕಂದಾಯ ವಿಭಾಗಗಳಲ್ಲಿ ಸಭೆ ನಡೆಸಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಇದಕ್ಕೆ ಪೂರಕವಾಗಿ ಸರ್ಕಾರ ನಂಬರ್ 18 ರಂದು ಸಂಪುಟ ಉಪಸಮಿತಿ ರಚಿಸಿದೆ. ಮುಂಬರುವ ದಿನಗಳಲ್ಲಿ ಆಯೋಗದ ವರದಿಯನ್ನು ಅನುಷ್ಠಾನ ಮಾಡಿ ಸಾಮಾಜಿಕ ನ್ಯಾಯ ನೀಡಬೇಕು ಎಂದು ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದರು.