ಕುಷ್ಟಗಿ(ಕೊಪ್ಪಳ): ಕೊರೊನಾ ವೈರಸ್ ಉಲ್ಬಣ ಹಾಗೂ ಕೆಲವು ಜಿಲ್ಲೆಗಳ ಲಾಕ್ ಡೌನ್ ಪರಿಣಾಮ, ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಯಮಿತ ಕುಷ್ಟಗಿ ಘಟಕದ ಆದಾಯ ಕಡಿಮೆಯಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಮೊದಲ ಹಂತದ ಲಾಕ್ ಡೌನ್ ಬಳಿಕ ಸಾರಿಗೆ ಸೇವೆ ಅಷ್ಟಕಷ್ಟೇಯಾಗಿತ್ತು. ಇದೀಗ ಕೊರೊನಾ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿದ್ದಂತೆ, ಕೊರೊನಾ ಭಯಕ್ಕೆ ಜನರು ಬಸ್ಗಳಲ್ಲಿ ಸಂಚರಿಸುವುದನ್ನೇ ಮರೆತಿದ್ದಾರೆ. ಈ ಹಿಂದೆ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದರು. ಇದೀಗ ಬದಲಾದ ಸನ್ನಿವೇಶದಲ್ಲಿ ಬಸ್ಸುಗಳು ಪ್ರಯಾಣಿಕರಿಗೆ ಕಾಯುವಂತಾಗಿದೆ.
ಸದ್ಯದ ತಿಂಗಳುಗಳಲ್ಲಿ ಮದುವೆ ಸೀಜನ್ನಲ್ಲಿ ಪ್ರತಿ ಬಸ್ 45 ಸಾವಿರ ಆದಾಯ ತರುತಿತ್ತು. ಇದೀಗ 9 ಬಸ್ಸುಗಳು ಸಂಚರಿಸಿದರೂ ಇಷ್ಟು ಆದಾಯ ಬರುತ್ತಿಲ್ಲ. ಬೆಂಗಳೂರು, ಮಂಗಳೂರು ಇತರೇ ಮಹಾ ನಗರಗಳಿಗೆ ಜನ ಗುಳೆ ಹೋಗುವುದು ಸ್ಥಗಿತವಾಗಿದ್ದು, ಆದಾಯಕ್ಕೆ ಹೊಡೆತ ಬಿದ್ದಿರುವುದು ಒಂದೆಡೆಯಾದರೆ ಬೆಂಗಳೂರು, ರಾಯಚೂರು, ಸಿಂಧನೂರು ಸೇರಿದಂತೆ ಕೆಲವು ತಾಲೂಕುಗಳ ಸ್ವಯಂಪ್ರೇರಿತ ಲಾಕ್ ಡೌನ್ ಹಿನ್ನೆಲೆಯಲ್ಲಿ 17 ಬಸ್ಸುಗಳನ್ನು ಮಾತ್ರ ನಿಲ್ದಾಣಕ್ಕೆ ಬಿಡಲಾಗಿದೆ. ಪ್ರಯಾಣಿಕ ಯಾರೂ ಹತ್ತದಿರುವುದರಿಂದ ಕೆಲವೇ ಬಸ್ಗಳು ಸಂಚರಿಸುತ್ತಿವೆ. ಬಹುತೇಕ ಬಸ್ಸುಗಳು ನಿಲ್ದಾಣದಲ್ಲಿ ನಿಂತು, ಡಿಪೋ ಸೇರಿವೆ. 74 ಬಸ್ಗಳು ಡಿಪೋದಲ್ಲೇ ಠಿಕಾಣಿ ಹೂಡಿವೆ.