ಕೊಪ್ಪಳ : ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ಸಿದ್ದರಾಮಯ್ಯರಿಗೆ ಅಭಿನಂದನೆ ಪತ್ರ ಬರೆದಿದ್ದಳು. ಈ ಪತ್ರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ವಿದ್ಯಾರ್ಥಿನಿ ಹರ್ಷ ವ್ಯಕ್ತಪಡಿಸಿದ್ದಾಳೆ.
ಕೊಪ್ಪಳ ನಗರದ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ 8ನೇ ತರಗತಿ ಓದುತ್ತಿರುವ ಶ್ರೇಯಾಂಕ ವಿ.ಮೆಣಸಗಿ ಎಂಬ ವಿದ್ಯಾರ್ಥಿನಿ ಸಿದ್ದರಾಮಯ್ಯರಿಗೆ ಮೇ 29ರಂದು ಪತ್ರ ಬರೆದಿದ್ದಳು. ಪತ್ರದಲ್ಲಿ ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮದ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಳು. ಈ ಬಾರಿಯೂ ಉತ್ತಮ ಆಡಳಿತ ನಡೆಸಲು ಮನವಿ ಮಾಡಿಕೊಂಡಿದ್ದಳು. ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಿನಗಿರುವ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು ಎಂದು ಮರಳಿ ಪತ್ರ ಬರೆದಿದ್ದಾರೆ. ಸಿಎಂ ಬರೆದಿರುವ ಅಭಿನಂದನಾ ಪತ್ರ ಓದಿ ವಿದ್ಯಾರ್ಥಿನಿ ಸಂತಸಗೊಂಡಿದ್ದಾಳೆ.
ವಿದ್ಯಾರ್ಥಿನಿಯ ಪತ್ರ ಹೀಗಿತ್ತು..: ನಮ್ಮ ಧೀಮಂತ ನಾಯಕ ಸಿದ್ದರಾಮಯ್ಯ 2013ರಲ್ಲಿ ಕರ್ನಾಟಕದ ಜನ ಮೆಚ್ಚಿದ ಮುಖ್ಯಮಂತ್ರಿ ಆಗಿ ದಕ್ಷ ಆಡಳಿತ ನಡೆಸಿದ್ದರು. ರಾಜ್ಯದ 22ನೇ ಮುಖ್ಯಮಂತ್ರಿಯಾಗಿ 2013ರಿಂದ 2018ರವರೆಗೆ ಯಾವುದೇ ಕಳಂಕವಿಲ್ಲದೆ ಉತ್ತಮ ಆಡಳಿತ ನಡೆಸಿದ್ದರು. ಇದೀಗ ಮೇ ತಿಂಗಳಲ್ಲಿ ಮತ್ತೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ತಮಗೆ ಸಮಸ್ತ ನಾಡಿನ ಜನತೆಯ ಪರವಾಗಿ ಮತ್ತು ಕೊಪ್ಪಳ ಜಿಲ್ಲೆಯ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.
ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ ನಾಡಿನ ಜನತೆ, ಬಡವರು, ದೀನ ದಲಿತರಿಗೆ ಮತ್ತು ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ನೆರವಾಗುವಿರೆಂದು ಭಾವಿಸುತ್ತೇನೆ. ಶೂ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ, ಅನ್ನ ಭಾಗ್ಯ, ಹೀಗೆ ಹಲವಾರು ಯೋಜನೆಗಳನ್ನು, ಭಾಗ್ಯಗಳನ್ನು ನೀಡಿ ಕರ್ನಾಟಕಕ್ಕೆ ಮಾದರಿ ಮುಖ್ಯಮಂತ್ರಿಗಳಾಗಿ ಆಡಳಿತ ನೀಡುವಿರೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮತ್ತೊಮ್ಮೆ ತಮಗೆ ಸಮಸ್ತ ನಾಡಿನ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಎಂದು ಎಂಟನೇ ತರಗತಿ ವಿದ್ಯಾರ್ಥಿನಿ ಶ್ರೇಯಾಂಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾಳೆ.
ಸಿಎಂ ಮರು ಪತ್ರದ ಸಾರಾಂಶ: ವಿದ್ಯಾರ್ಥಿನಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಪ್ರೀತಿಯ ಶ್ರೇಯಾಂಕ, ತಾವು ಬರೆದ ಅಭಿನಂದನಾ ಪತ್ರ ತಲುಪಿದೆ. ಇಂದಿನ ಮಕ್ಕಳೇ ನಾಳಿನ ರಾಷ್ಟ್ರ ನಿರ್ಮಾತೃಗಳು. ಎಂಟನೇ ತರಗತಿಯಲ್ಲಿ ಓದುತ್ತಿರುವ ನಿಮ್ಮ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಈ ಎಳೆಯ ವಯಸ್ಸಿನಲ್ಲಿ ಬಡವರು, ದೀನದಲಿತರು, ರೈತರ ಬಗೆಗಿನ ಕಾಳಜಿ ಬೆರಗು ಮೂಡಿಸುವಂಥದ್ದು. ಜೀವನದಲ್ಲಿ ಶ್ರದ್ಧೆ ಮತ್ತು ಪರಿಶ್ರಮದಿಂದ ಕಲಿತು , ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗು ಎಂದು ಹಾರೈಸುತ್ತೇನೆ ಎಂದು ಮರಳಿ ಪತ್ರ ಬರೆದಿದ್ದಾರೆ.
ವಿದ್ಯಾರ್ಥಿನಿ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಶ್ರೇಯಾಂಕ, ನಾನು ನನ್ನ ತಂದೆಯವರ ಸಹಾಯದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಸಿಎಂ ಸಿದ್ದರಾಮಯ್ಯ ನವರು ಹಿಂದೆ ಸಿಎಂ ಆಗಿದ್ದಾಗ ಬಡ ಜನರಿಗೆ ಶಾದಿ ಭಾಗ್ಯ, ಅನ್ನ ಭಾಗ್ಯ ಮುಂತಾದ ಯೋಜನೆಗಳಿಂದ ಉತ್ತಮ ಆಡಳಿತ ನೀಡಿದ್ದರು. ಇನ್ನು ಮುಂದೆಯೂ ಇಂತೆಯೇ ಉತ್ತಮ ಆಡಳಿತ ನೀಡುವಂತೆ ಕೋರುತ್ತೇನೆ. ಸಿಎಂ ಪ್ರತಿಕ್ರಿಯೆಯಿಂದ ತುಂಬಾ ಖುಷಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಶಾಸಕ ದತ್ತು ಪಡೆದ ಶಾಲೆಯಲ್ಲೇ ಇಲ್ಲ ಶೌಚಾಲಯ: ಸಿಎಂಗೆ ಪತ್ರ ಬರೆದ ವಿದ್ಯಾರ್ಥಿನಿ