ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ಆದಿಶಕ್ತಿ ಬೆಟ್ಟದಲ್ಲಿ ಯುವಕನ ಮೇಲೆ ದಾಳಿ ಮಾಡಿ ಆತನ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಳೆದ ನಾಲ್ಕು ದಿನಗಳಿಂದ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದರೆ ಅದ್ಯಾವುದಕ್ಕೂ ಜಗ್ಗದ ಚಿರತೆ ಮಾತ್ರ ಅಲ್ಲಲ್ಲೇ ದರ್ಶನ ನೀಡುತ್ತಾ ಬೋನಿಗೆ ಮಾತ್ರ ಬೀಳದೆ ಚಳ್ಳೆಹಣ್ಣು ತಿನಿಸುತ್ತಿದೆ.
ಹೌದು.. ಆಗಾಗ ಬೆಟ್ಟ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿಸಿದೆ. ಭಾನುವಾರ ಸಂಜೆ ಮತ್ತೆ ಚಿರತೆ ದುರ್ಗಾ ಬೆಟ್ಟದಲ್ಲಿ ಪ್ರತ್ಯಕ್ಷವಾಗಿತ್ತು ಎನ್ನಲಾಗಿದ್ದು, ಸ್ಥಳೀಯ ಯುವಕ ಚಿರತೆಯ ಚಲನಾವಲನಗಳ ದೃಶ್ಯ ಸೆರೆ ಹಿಡಿದ್ದಿದ್ದಾರೆ. ಇದಕ್ಕೂ ಮೊದಲು ಆನೆಗೊಂದಿ ರಾಜರಿಗೆ ಸೇರಿದ ಗಡ್ಡಿ ಸಮೀಪದ ಮಧುವನದ ಸಮೀಪ ಚಿರತೆ ಓಡಾಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಲ್ಲದೇ, ವಿರುಪಾಪುರಗಡ್ಡಿಯ ಬೆಂಚಿಕುಟ್ರಿ ಎಂಬಲ್ಲಿ ಕರುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿದ್ದ ಹಿನ್ನೆಲೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನಿರಿಸಿ ಅದರಲ್ಲಿ ಕುರಿಮರಿಯೊಂದನ್ನು ಇರಿಸಿತ್ತು. ಆದರೆ ಆ ಚಾಲಾಕಿ ಚಿರತೆ ಬೋನಿನಲ್ಲಿದ್ದ ಕುರಿಮರಿಯನ್ನು ಹೊತ್ತು ಪರಾರಿಯಾಗಿದೆ ಎನ್ನಲಾಗಿದೆ.
ಚಿರತೆ ಉಪಟಳದಿಂದ ರೋಸಿಹೋಗಿರುವ ಅರಣ್ಯ ಇಲಾಖೆ ಸದ್ಯ ಕರಿಯಮ್ಮನಗಡ್ಡಿಯಲ್ಲಿ ಬೋನು ಇರಿಸಿದೆ. ಈ ಬಾರಿಯಾದರೂ ಚಿರತೆ ಬೋನಿಗೆ ಬಿದ್ದು ಗ್ರಾಮಸ್ಥರ ಆತಂಕ, ಅರಣ್ಯ ಇಲಾಖೆಯವರ ತಲೆನೋವು ದೂರ ಮಾಡುತ್ತದೆಯೇ ಕಾದು ನೋಡಬೇಕು.