ಗಂಗಾವತಿ : ಕಳೆದೊಂದು ತಿಂಗಳಿಂದ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಮೂಡಿಸಿದ್ದ ನರಭಕ್ಷಕ ಚಿರತೆ ದುರ್ಗಾ ಬೆಟ್ಟದಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಕಳೆದೊಂದು ವಾರದಿಂದ ದುರ್ಗಾ ಬೆಟ್ಟದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆಗೆ ಯತ್ನ ನಡೆಸಿತ್ತು. ಇದರ ಫಲವಾಗಿ ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸುಮಾರು ಐದು ವರ್ಷ ಪ್ರಾಯದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ದುರ್ಗಾ ಬೆಟ್ಟದ ಬಳಿ ವ್ಯಕ್ತಿಯೋರ್ವರು ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ ಚಿರತೆ ಘರ್ಜನೆ ಕೇಳಿ ಬೋನಿನ ಸಮೀಪಕ್ಕೆ ಹೋಗಿ ನೋಡಿದಾಗ ಸೆರೆಯಾಗಿರುವ ವಿಷಯ ತಿಳಿದು ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಓದಿ : ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಟಿಕೆಟ್ ದರ ಏಕಾಏಕಿ 5 ಪಟ್ಟು ಹೆಚ್ಚಳ.. ಬರೀ 2 ಗಂಟೆಗೆ ₹50..
ಸ್ಥಳಕ್ಕೆ ಡಿಎಫ್ಒ ಹರ್ಷಭಾನು, ಆರ್ಎಫ್ಒ ಶಿವರಾಜ್ ಮೇಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಸೆರೆಯಾದ ಚಿರತೆಯನ್ನು ಸ್ಥಳಾಂತರಿಸಿದ್ದಾರೆ. ಪಶುವೈದ್ಯರಿಂದ ಅರವಳಿಕೆ ಕೊಡಿಸಿ ಆರೋಗ್ಯ ತಪಾಸಣೆ ನಡೆಸಲಾಗುವುದು. ಬಳಿಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುವ ಅಥವಾ ಮೃಗಾಲಯಕ್ಕೆ ಕಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
ಕಳೆದೊಂದು ತಿಂಗಳಿಂದ ಆನೆಗೊಂದು ಸುತ್ತಲೂ ಪ್ರದೇಶದಲ್ಲಿ ಚಿರತೆಗಳ ಹಾವಳಿ ವಿಪರೀತವಾಗಿತ್ತು. ಇದರಿಂದ ಜನ ಆತಂಕಗೊಂಡಿದ್ದರು. ಈಗ ಚಿರತೆ ಸೆರೆಯಾಗಿರುವುದು ಕೊಂಚ ನೆಮ್ಮದಿ ತಂದಿದೆ. ಇದೇ ದುರ್ಗಾ ಬೆಟ್ಟದಲ್ಲಿ ಯುವಕನ ಮೇಲೆ ದಾಳಿ ಮಾಡಿ ಚಿರತೆ ಯುವಕನನ್ನು ಎಳೆದೊಯ್ದು ಕೊಂದು ಹಾಕಿತ್ತು.