ಕುಷ್ಟಗಿ/ಕೊಪ್ಪಳ: ತಾಲೂಕಿನ ರ‌್ಯಾವಣಕಿ ಗ್ರಾಮದ ಜಾಲಿಹಾಳ ರಸ್ತೆಯಲ್ಲಿ ಭೂಕುಸಿತ ಸಂಭವಿಸುವ ಲಕ್ಷಣಗಳು ಕಂಡುಬಂದಿದ್ದು, ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ.
ರ‌್ಯಾವಣಕಿ ಹಳ್ಳದಿಂದ 500 ಮೀಟರ್ ಅಂತರದಲ್ಲಿರುವ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಮೂರು ಅಡಿ ಆಳದ ಹೊಂಡ ಸೃಷ್ಟಿಯಾಗಿದೆ. ಇದಕ್ಕೆ ಮಣ್ಣು ಹಾಕಿ ಭರ್ತಿ ಮಾಡಿ ಸರಿ ಮಾಡಿದರೂ ಕೂಡ ಪುನಃ ಕುಸಿದಿದೆ. ರಸ್ತೆಯ ಬದಿಯಲ್ಲಿ ನೀರು ನಿಲ್ಲುತ್ತಿರುವ ಹಿನ್ನೆಲೆ ಮಣ್ಣು ಕುಸಿದಿದೆ ಎನ್ನಲಾಗುತ್ತಿದೆ.
ಸದ್ಯಕ್ಕೆ ರಸ್ತೆಯಲ್ಲಿ ಬೈಕ್ ಮಾತ್ರ ಸಂಚರಿಸುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಕುಸಿದ ಭಾಗವನ್ನು ಸರಿಪಡಿಸಬೇಕೆಂದು ಗ್ರಾಮಸ್ಥರಾದ ನಾಗರಾಜ್ ರ‌್ಯಾವಣಕಿ ಆಗ್ರಹಿಸಿದ್ದಾರೆ.