ಕುಷ್ಟಗಿ (ಕೊಪ್ಪಳ): ತಲೆ ಮೇಲೆ ಕಲ್ಲು ಎತ್ತಿಹಾಕಿ ಹೆಂಡತಿ ಕೊಲೆ ಮಾಡಿ ಪತ್ನಿ ಇನ್ನು ಜೀವಂತವಾಗಿದ್ದಾಳೆ ಎಂದು ನಾಟಕವಾಡಿದ್ದ ಪತಿರಾಯನ ಕಳ್ಳಾಟವನ್ನು ಬಯಲು ಮಾಡುವಲ್ಲಿ ಕುಷ್ಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ರವಿಕುಮಾರ್ ಹಿರೇಮನಿ ಬಂಧಿತ ಆರೋಪಿ. ತಾಲೂಕಿನ ನೆರೆಬೆಂಟಿ ಗ್ರಾಮದ ಹನುಮಂತಪ್ಪ ಬಂಡಿಹಾಳ ಪುತ್ರಿ ದೈಹಿಕ ಶಿಕ್ಷಕಿ ಮಂಜವ್ವ ಮೃತ ದುರ್ದೈವಿ.
ಪ್ರಕರಣ ಹಿನ್ನೆಲೆ
ಮಂಜವ್ವ 2016 ರಲ್ಲಿ ಹುಬ್ಬಳ್ಳಿಯ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆಯಲ್ಲಿದ್ದಳು. ಅಲ್ಲಿ ರವಿಕುಮಾರ್ನನ್ನು ಭೇಟಿಯಾಗಿದ್ದಳು. ಒಂದೇ ತಾಲೂಕಿನವರು ಎನ್ನುವ ಕಾರಣಕ್ಕೆ ಸ್ನೇಹ ಬೆಳೆದು ಪ್ರೀತಿ ಚಿಗುರಿತ್ತು. ಅನ್ಯ ಜಾತಿಯವರರಾಗಿದ್ದರೂ ಪರಸ್ಪರ ಪ್ರೀತಿಯ ಹಿನ್ನೆಲೆಯಲ್ಲಿ ಕುಷ್ಟಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 11-12-2018 ರಲ್ಲಿ ವಿವಾಹ ಆಗಿದ್ದರು.
19-05-2019 ರಂದು 5 ತಿಂಗಳು ಗರ್ಭಿಣಿಯಾಗಿದ್ದ ಮಂಜವ್ವಳನ್ನು ರವಿಕುಮಾರ್ ತಾನು ಕೆಲ ಮಾಡುತ್ತಿದ್ದ ವಿಜಯಪುರದ ವಿಂಡ್ ಪವರ್ ಕಂಪನಿಗೆ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ವಿಜಯಪುರ ಹಿಟ್ನಳ್ಳಿ ಬಳಿ ಪತ್ನಿ ಮಂಜವ್ವಳ ಮೇಲೆ ಹಲ್ಲೆ ಮಾಡಿ ಕಲ್ಲು ಎತ್ತಾಕಿ ಕೊಲೆ ಮಾಡಿದ್ದ. ವಿಜಯಪುರ ಗ್ರಾಮೀಣ ಪೊಲೀಸರಿಗೆ ಕೊಲೆಯಾದ ಮಂಜವ್ವಳ, ಮುಖ ನಜ್ಜು ಗುಜ್ಜಾಗಿದ್ದರಿಂದ ಗುರುತು ಸಾಧ್ಯವಾಗಿರಲಿಲ್ಲ.
ಬಾಂಡ್ ಬರೆಸಿಕೊಂಡಿದ್ದ ಆರೋಪಿ: ಮಗಳು ಎಲ್ಲಿದ್ದಾಳೆ ಎಂಬ ಅನುಮಾನ ಮಂಜವ್ವಳ ತಂದೆ ಹನಮಂತಪ್ಪ ಅವರನ್ನು ಕಾಡಿತ್ತು. ಈ ಬೆಳವಣಿಗೆ ಹಿನ್ನೆಲೆ ಕೊಲೆ ರಹಸ್ಯ ಬಯಲಾಗುತ್ತೆ ಎಂದು ತಿಳಿದ ಆರೋಪಿ ಕುಷ್ಟಗಿಯಲ್ಲಿ ಮೂವರ ಹಿರಿಯರ ಸಮಕ್ಷಮದಲ್ಲಿ ಮಂಜವ್ವ ಬೇರೆಡೆ ಜೀವಂತವಿದ್ದು ಜೀವನ ನಡೆಸುತ್ತಿದ್ದಾಳೆ. ರವಿಕುಮಾರ ಹಿರೇಮನಿಗೆ ಮತ್ತೊಂದು ಮದುವೆ ಮಾಡಿಕೊಳ್ಳಲು ಅಭ್ಯಂತರ ಏನೂ ಇಲ್ಲ ಎಂದು ಬಾಂಡ್ ಪತ್ರ ಬರೆಯಿಸಿಕೊಂಡಿದ್ದ.
ಮಗಳ ನಾಪತ್ತೆ ಬಗ್ಗೆ ಹನಮಂತಪ್ಪನಿಂದ ದೂರು ದಾಖಲು: ಮಗಳು ಜೀವಂತ ಇರುವ ಬಗ್ಗೆಯೇ ಅನುಮಾನಗೊಂಡ ಹನಮಂತಪ್ಪ 04-08-2021 ರಂದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ಹಾಗೂ ಪತಿ ರವಿಕುಮಾರ ಹಿರೇಮನಿ ಮೇಲೆ ಅನುಮಾನ ಇರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಹಾಗೂ ಪಿಎಸ್ಐ ತಿಮ್ಮಣ್ಣ ನಾಯಕ ಅವರು ಈ ನಿಟ್ಟಿನಲ್ಲಿ ತನಿಖೆ ಕೈಗೊಂಡು ರವಿಕುಮಾರ ಹಿರೇಮನಿ ಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ವಿವಾಹವಾಗಿ ಪರಿವರ್ತನೆಯಾದ ಅನೈತಿಕ ಸಂಬಂಧ: ಪೊಲೀಸರ ವಿಚಾರಣೆಯಲ್ಲಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ರವಿಕುಮಾರ ಹಿರೇಮನಿಗೆ ಮಂಜವ್ವಳನ್ನು ಮದುವೆಯಾಗುವ ಇಷ್ಟವಿರಲಿಲ್ಲವಂತೆ. ಆದರೆ, ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ 2 ತಿಂಗಳ ಗರ್ಭವತಿ ಆಗಿದ್ದಳು. ಮದುವೆ ಆಗದೇ ಇದ್ದಲ್ಲಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ನೀಡುವುದಾಗಿ ಹೆದರಿಸಿದ್ದಳು. ಒಲ್ಲದ ಮನಸಿನಿಂದ ಕುಷ್ಟಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರು ಮದುವೆ ಆಗಿದ್ದರು.
ಒಲ್ಲದ ಮನಸ್ಸಿನ ಸಂಸಾರವೇ ಕೊಲೆಗೆ ಕಾರಣ: ಮಂಜವ್ವಳೆನೋ ಬೇಕಾಗಿ ಮದುವೆಯಾದಳು, ಆದರೆ ಒಲ್ಲದ ಮನಸ್ಸಿನಿಂದ ರವಿಕುಮಾರ್ ತಾಳಿ ಕಟ್ಟಿದ್ದ. ಇದರಿಂದ ಸಂಸಾರದಲ್ಲಿ ಹೊಂದಾಣಿಕೆ ಆಗದೇ ಪರಸ್ಪರ ಜಗಳಕ್ಕೆ ಕಾರಣ ಆಗಿತ್ತು. ಇದರಿಂದ ಹತಾಶನಾಗಿದ್ದ ರವಿಕುಮಾರ ಹಿರೇಮನಿ ಪತ್ನಿಯನ್ನು ವಿಜಯಪುರ ಜಿಲ್ಲೆ ಹಿಟ್ನಳ್ಳಿ ಬಳಿ ಮಿನಿ ಸೇತುವೆ ಕೆಳಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ.
ಪೊಲೀಸರಿಗೆ ಬಹುಮಾನ: ಮುಚ್ಚಿ ಹೋದ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರು, ಸೂಕ್ತ ಬಹುಮಾನ ಪ್ರಕಟಿಸಿದ್ದಾರೆ.