ಕುಷ್ಟಗಿ(ಕೊಪ್ಪಳ): ತಾಲೂಕಿನ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ತುಮರಿಕೊಪ್ಪ ಅವರು ತಾವು ಸೇವೆ ಸಲ್ಲಿಸುತ್ತಿರುವ ಶಾಲೆಯ ಅಭಿವೃದ್ಧಿಗೆ ತಮ್ಮ ಒಂದು ತಿಂಗಳ ವೇತನ ಅಂದ್ರೆ 32 ಸಾವಿರ ರೂ. ಮೊತ್ತದ ಚೆಕ್ ಅನ್ನು ನೀಡಿದ್ದಾರೆ. ಈ ಹಣದಿಂದ ಶಾಲೆಗೆ ಬಣ್ಣ ಮತ್ತು ಸ್ಮಾರ್ಟ್ ಕ್ಲಾಸ್‌ಗೆ ಉಪಯೋಗಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಶರಣಪ್ಪರ ಸಹಾಯದಿಂದ ಪ್ರೇರಿತರಾದ ಗ್ರಾಮದ ಹುಲ್ಲೇಶ 10 ಸಾವಿರ ರೂ., ಬಿ.ಆರ್.ಪಿ ಜೀವನ್ ಸಾಬ್ ವಾಲಿಕಾರ್ 2 ಸಾವಿರ ರೂ. ಕೊಟ್ಟು ಶಾಲಾಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಈ ಹಿನ್ನೆಲೆ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗಾಗಿ ಒಂದು ತಿಂಗಳ ವೇತನ ನೀಡಿದ ಮುಖ್ಯ ಶಿಕ್ಷಕರಾದ ಶರಣಪ್ಪ ತುಮರಿಕೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮೀಣ ಪ್ರದೇಶದ ಶಾಲೆಗಳ ಮಕ್ಕಳಿಗೆ ಈಗಿನ ಅಧುನಿಕ ಶಿಕ್ಷಣ ಕಾಲ್ಪನಿಕ ಆಗದೇ ಪ್ರಾಯೋಗಿಕವಾಗಿ ಕಾರ್ಯರೂಪವೇ ಸ್ಮಾರ್ಟ್ ಕ್ಲಾಸ್ ಆಗಿದೆ. ಇದರಿಂದ ಮಕ್ಕಳು ಸುಲಭವಾಗಿ ಗ್ರಹಿಸಲು ಸಾಧ್ಯವಿದ್ದು, ಶಾಲೆಗೆ ಗೈರು ಆಗುವುದನ್ನು ತಪ್ಪಿಸಬಹುದಾಗಿದೆ. ಸ್ಮಾರ್ಟ್ ಕ್ಲಾಸ್ನಲ್ಲಿ ಪರದೆಯ ಮೇಲೆ ನೋಡಿರುವುದನ್ನು ವಿದ್ಯಾರ್ಥಿಗಳು ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾಗಿದೆ ಎನ್ನುತ್ತಾರೆ ಮುಖ್ಯಶಿಕ್ಷಕ ಶರಣಪ್ಪ.
ಓದಿ: ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ದೋಖಾ ಆರೋಪ: ಲೋಕಾಯುಕ್ತಕ್ಕೆ ದೂರು
ಸದ್ದಿಲ್ಲದೆ ಸ್ಮಾರ್ಟ್ ಕ್ಲಾಸ್ ಕ್ರಾಂತಿ: ಶರಣಪ್ಪ ತುಮರಿಕೊಪ್ಪ ಅವರು ಸಿಆರ್ಪಿ ಸೇವೆಯಲ್ಲಿ ಲಿಂಗದಳ್ಳಿ, ಹುಲಿಯಾಪುರ, ಮೆಣೆದಾಳ, ಎಂ. ರಾಂಪೂರ, ಹಿರೇಮುಕರ್ತಿನಾಳ, ಸಂಗನಾಳ, ವೀರಾಪೂರ, ಹಿರೇತೆಮ್ಮಿನಾಳ, ಸಿದ್ದಾಪುರ, ಶಾಲೆಗಳಿಗೆ ಗ್ರಾಮಸ್ಥರ ವಂತಿಗೆ ಹಾಗೂ ಶಿಕ್ಷಕರ ವಂತಿಗೆಯ ಸಹಕಾರದಿಂದ ಸದರಿ ಶಾಲೆಗಳು ಸ್ವಂತ ಸ್ಮಾರ್ಟ್ ಕ್ಲಾಸ್ ಹೊಂದಲು ಪ್ರೇರಣೆಯಾಗಿದ್ದು, ಹೊಮ್ಮಿನಾಳ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕಾರ್ಯ ಸದ್ಯ ಪ್ರಗತಿಯಲ್ಲಿದೆ.
ಈ ಬೆಳವಣಿಗೆ ಹಿನ್ನೆಲೆ ತಾಲೂಕಿನ ಪ್ರತಿ ಶಾಲೆ ಸ್ಮಾರ್ಟ್ ಕ್ಲಾಸ್ ಹೊಂದಬೇಕೆನ್ನುವ ಕ್ರಾಂತಿ ಸದ್ದಿಲ್ಲದೆ ಕುಷ್ಟಗಿಯಲ್ಲಿ ಶುರುವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಉಳಿದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿ ಹೊಂದುವ ಯೋಜನೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇಚ್ಛಾಶಕ್ತಿ ಮೇರೆಗೆ ಚಾಲನೆ ಸಿಕ್ಕಿರುವುದು ಮಹತ್ವದ ಬೆಳವಣಿಗೆ ಆಗಿದೆ.