ಕುಷ್ಟಗಿ (ಕೊಪ್ಪಳ): ಪಟ್ಟಣದ 1ನೇ ವಾರ್ಡ್ ವ್ಯಾಪ್ತಿಯ ಮಾರುತಿ ನಗರದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಗರವನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ.
ತಾಲೂಕಾಡಳಿತ, ಪುರಸಭೆ ಹಾಗೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದು, ಸೋಂಕಿತನ ಮನೆಯ ಸುತ್ತಮುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಸೋಂಕಿತ ಯುವಕನ ಮನೆ ಶಾಲಾ ಕಂಪೌಂಡ್‌ಗೆ ಹೊಂದಿಕೊಂಡಿದ್ದು ಶಾಲೆಯ ಮುಖ್ಯದ್ವಾರವನ್ನು ಮುಚ್ಚಲಾಗಿದೆ.
ತಹಶೀಲ್ದಾರ್ ಭೇಟಿ:
ತಹಶೀಲ್ದಾರ ಎಂ.ಸಿದ್ದೇಶ್ ಭೇಟಿ ನೀಡಿದ್ದು, ಕಂಟೇನ್ಮೆಂಟ್ ಪ್ರದೇಶದಲ್ಲಿರುವ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಈ ಪ್ರದೇಶದ ಜನರು ಹೋಮ್ ಕ್ವಾರಂಟೈನ್‌ನ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಸಹಾಯಕರು ಮನೆ ಮನೆ ಸಮೀಕ್ಷೆ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಅವರು ಜನರ ಅರೋಗ್ಯ ವಿಚಾರಿಸಲಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು ತಿಳಿಸಿದರು.