ಕುಷ್ಟಗಿ (ಕೊಪ್ಪಳ): ಪಟ್ಟಣದ 1ನೇ ವಾರ್ಡ್ನ ಲಿಯೋ ಕಾಲೋನಿಯಲ್ಲಿ ಕೊರೊನಾ ಸೋಂಕು ದೃಢವಾಗಿರುವ ಮನೆಯವರು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸದರಿ ಮನೆಯ ಸದಸ್ಯರನ್ನು ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್ಗೆ ಸ್ಥಳಾಂತರಿಸಬೇಕೆಂದು ಸ್ಥಳೀಯರು ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರೆಸ್ತೇದಾರ್ ಸತೀಶ್ ಅವರಿಗೆ ಮನವಿ ಸಲ್ಲಿಸಿದರು.
ಲಿಯೋ ಕಾಲೋನಿಯಲ್ಲಿ ಕೊರೊನಾ ಸೋಂಕು ದೃಢವಾದ ಇಬ್ಬರು ಸಹೋದರರ ಪೈಕಿ, ಓರ್ವ ಸರ್ಕಾರಿ ವೈದ್ಯ ಗುಣಮುಖರಾಗಿದ್ದು, ಅವರ ಸಹೋದರನಿಗೆ ಸೋಂಕು ತಗುಲಿದೆ. ಹೀಗಾಗಿ ಮನೆಯವರು, ಮನೆಯಲ್ಲಿ ಇರದೇ ಹೊರಗೆ ಬರುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಪಿಎಸ್ಐ ಚಿತ್ತರಂಜನ್ ನಾಯಕ್ ಭೇಟಿ ನೀಡಿ, ಹೋಮ್ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳುವವರೆಗೂ ಮನೆಯಲ್ಲಿರಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಲಿಯೋ ಕಾಲೋನಿ ನಿವಾಸಿ ಪುರಸಭೆ ಸದಸ್ಯ ವಸಂತ ಮೇಲಿನಮನಿ ಅವರು ಪ್ರತಿಕ್ರಿಯಿಸಿ, ಕೊರೊನಾ ಸೋಂಕಿತ ಕುಟುಂಬದ ಕೆಲ ಸದಸ್ಯರು ಪ್ರಾಥಮಿಕ ಸಂಪರ್ಕಿತರು ಆಗಿದ್ದು, ಹೊರಗೆ ಬರುತ್ತಿರುವುದು ನೋಡಿದರೆ ಈ ವೈರಸ್ ಇಡೀ ಕಾಲೋನಿ ಹಬ್ಬುವ ಆತಂಕವಿದೆ. ಈ ಆತಂಕ ಹೋಗಲಾಡಿಸಲು ಮನೆಯ ಸದಸ್ಯರನ್ನು ಗುಣಮುಖವಾಗುವರೆಗೂ ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಬೇಕು. ಇಲ್ಲವಾದಲ್ಲಿ ನಾವೇ ಮನೆ ಬಿಡುವ ಯೋಚನೆಯಲ್ಲಿದ್ದೇವೆ. ಪೊಲೀಸರು, ಹೊರತು ಪಡಿಸಿದರೆ ಪುರಸಭೆಯವರು ಅಗತ್ಯ ವಸ್ತುಗಳು, ಮೂಲ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿದರು.