ಕೊಪ್ಪಳ: ದೇಶಾದ್ಯಂತ ದಿನೇ ದಿನೆ ಕೋವಿಡ್ ಉಲ್ಬಣಗೊಳ್ಳುತ್ತಿದೆ. ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನವನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಇದೇ ಜನವರಿ 15 ರಿಂದ 31ರ ವರೆಗೆ ಸಾರ್ವಜನಿಕ ದರ್ಶನ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ದೇವಸ್ಥಾನದಲ್ಲಿನ ಜಾತ್ರೆ, ಉತ್ಸವ, ವಿಶೇಷ ಉತ್ಸವವನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಸುತ್ತಲಿನ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಭರ್ತಿ: ಗಂಗಾಪೂಜೆ ನೆರವೇರಿಸಿದ ಸದ್ಗುರು ಸತ್ ಉಪಾಸಿ
ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಯ ದಿನಗಳಂದು ಸಾವಿರಾರು ಭಕ್ತರು ಹುಲಗಿಗೆ ಆಗಮಿಸುತ್ತಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದಲೂ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.