ಕೊಪ್ಪಳ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಸಿಗುತ್ತಿದ್ದ ಚಿಕಿತ್ಸೆಯನ್ನು ನಗರದಲ್ಲಿನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಕೋವಿಡ್-19 ಹೊರತುಪಡಿಸಿ ಉಳಿದ ಚಿಕಿತ್ಸೆಗೆ ಬರುವ ಒಳ ಹಾಗೂ ಹೊರ ರೋಗಿಗಳಿಗಾಗಿ ನಗರದ 9 ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿದೆ.
ಸಾಮಾನ್ಯ ಚಿಕಿತ್ಸೆಗೆ ಕೆ.ಎಸ್. ಆಸ್ಪತ್ರೆ, ಜಿಎಸ್ಆರ್ ಆಸ್ಪತ್ರೆ, ಹೆರಿಗೆಗಾಗಿ ಮಂಗಳಾ ಹೆರಿಗೆ ಆಸ್ಪತ್ರೆ, ಗೋವಿನಕೊಪ್ಪ ಹೆರಿಗೆ ಆಸ್ಪತ್ರೆ, ವಾತ್ಸಲ್ಯ ಹೆರಿಗೆ ಆಸ್ಪತ್ರೆ, ಸಾಮಾನ್ಯ ಮತ್ತು ಹೆರಿಗೆಗಾಗಿ ಖುಷಿ ಆಸ್ಪತ್ರೆ, ಸಿಟಿ ಹಾಸ್ಪಿಟಲ್, ಚಿಕ್ಕ ಮಕ್ಕಳಿಗಾಗಿ ಭಗವತಿ ಮತ್ತು ಬಾಪೂಜಿ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಒಂಭತ್ತು ಆಸ್ಪತ್ರೆಗಳು ಸೇರಿ ಒಟ್ಟು 330 ಹಾಸಿಗೆಗಳು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.