ಗಂಗಾವತಿ: ಕೊಪ್ಪಳ ಜಿಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಾನಾ ಯೋಜನೆಗಳಲ್ಲಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಮೂಲಕ ಮಾನ-ಪ್ರಾಣ ಕಾಪಾಡುವಂತೆ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕನಕಗಿರಿ ತಾಲೂಕಿನ ಹುಲಿಹೈದರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶಾಂತಾ ರಮೇಶ ನಾಯಕ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ ಪ್ರೌಢಶಾಲಾ ಕಟ್ಟಡಗಳ ಕಾಮಗಾರಿಯನ್ನು ನಿಗದಿತ ವೇಳೆಗೆ ಪೂರ್ಣಗೊಳಿಸಿದರೂ, ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದೆ ಸತಾಯಿಸುತ್ತಿದೆ.
ಇದರಿಂದಾಗಿ ಜಿಲ್ಲೆಯ ನೂರಾರು ಜನ ಗುತ್ತಿಗೆದಾರರಿಗೆ ಸಕಾಲಕ್ಕೆ ಹಣ ಸಿಗದೆ ಪರದಾಡುವಂತಾಗಿದೆ. ಕೆಲಸ ಮಾಡಿದ ಗುತ್ತಿಗೆದಾರರ ಮಾನ-ಮರ್ಯಾದೆ ಹರಾಜಾಗುತ್ತಿದೆ. ಕೆಲವರ ಪ್ರಾಣಕ್ಕೂ ಕಂಟಕವಾಗಿದೆ. 2018-19ನೇ ಸಾಲಿನ ಅನುದಾನದಡಿ ಜಿಲ್ಲೆಯ ವಿವಿಧೆಡೆ ಪ್ರೌಢಶಾಲಾ ಕಟ್ಟಡಗಳ ನಿರ್ಮಾಣದ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಎರಡು ವರ್ಷಗಳಾದರೂ ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಕೋಟಿಗಟ್ಟಲೇ ಹಣ ಬಾಕಿ ಉಳಿಸಿಕೊಂಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಇಲಾಖೆಗೆ ಸಾಕಷ್ಟು ಬಾರಿ ಅಲೆದಾಡಿದರೂ ಅವರಿಗೆ ಸೇರಬೇಕಾದ ಅರ್ಧದಷ್ಟು ಹಣವನ್ನು ನೀಡದೆ ಸತಾಯಿಸುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದ್ದು, ಕೂಡಲೇ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗೆ ಬಾಕಿ ಹಣ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಶಾಂತಾ ರಮೇಶ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್