ಗಂಗಾವತಿ : ದೇಶದಲ್ಲಿ ಪ್ರತಿವರ್ಷ ಬೇಸಿಗೆ ಮತ್ತು ಚಳಿಗಾಲದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಪದ್ಧತಿಯಿದ್ದು, ಅದರ ಬದಲಿಗೆ ಮಳೆಗಾಲದಲ್ಲಿ ರಜೆ ನೀಡುವ ವ್ಯವಸ್ಥೆ ಜಾರಿಗೆ ತರುವಂತೆ ಆಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ.
ಕೊಪ್ಪಳ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಚೇಂಬರ್ ಆಫ್ ಕಾಮರ್ಸ್)ಯ ಅಧ್ಯಕ್ಷ ಅಶೋಕ್ ಸ್ವಾಮಿ ಹೇರೂರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಯಾವ ಕಾರಣಕ್ಕೆ ಬೇಸಿಗೆ ಮತ್ತು ಚಳಿಗಾದ ರಜೆ ರದ್ದು ಮಾಡಬೇಕು ಎಂಬುವುದರ ಕುರಿತು ವಿವರಣೆ ನೀಡಿದ್ದಾರೆ.
ಬೇಸಿಗೆಯಲ್ಲಿ ರಜೆ ನೀಡುವ ಪದ್ಧತಿ ಬ್ರಿಟಿಷರ ಕಾಲದಿಂದಲೂ ಇದೆ. ಇದರ ಬದಲಾಗಿ ಕಾಲಕ್ಕೆ ತಕ್ಕಂತೆ ಮತ್ತು ದೇಶದ ಮಾನ್ಸೂನ್ ಅವಧಿಗೆ ತಕ್ಕಂತೆ ರಜೆ ಜಾರಿ ಮಾಡುವುದು ಸೂಕ್ತ. ಕೊರೊನಾ ಲಾಕ್ ಡೌನ್ ನಿಂದಾಗಿ ಶಾಲಾ-ಕಾಲೇಜುಗಳ ಆರಂಭಕ್ಕಿದ್ದ ಸಮಯ ಮಿಂಚಿ ಹೋಗಿದೆ. ಪ್ರಸಕ್ತ ವರ್ಷದಿಂದಲೇ ಈ ಪದ್ಧತಿ ಜಾರಿಯಾದರೆ ಅನುಕೂಲವಾಗಲಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಅಶೋಕಸ್ವಾಮಿ ತಿಳಿಸಿದ್ದಾರೆ.