ಕೊಪ್ಪಳ: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ರಾಜ್ಯದ ಹಲವೆಡೆ ಆಕ್ಸಿಜನ್ ಸಮಸ್ಯೆ ತಲೆದೋರಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗದು ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಸಿಗದೆ ಸೋಂಕಿತರು ಸಾವನ್ನಪ್ಪಿದ ಘಟನೆ ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ಗಂಟೆಯಾಗಿದೆ. ಈ ನಡುವೆ ರಾಜ್ಯದ ಅಲ್ಲಲ್ಲಿ ಆಕ್ಸಿಜನ್ ಕೊರತೆ ಇದೆ ಎಂಬ ಬಲವಾದ ಆರೋಪದ ನಡುವೆ ಕೊಪ್ಪಳ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗದು ಎಂಬುದು ಅಧಿಕಾರಿಗಳ ಮಾತಾಗಿದೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ವಿವಿಧ ಕೈಗಾರಿಕೆಗಳಲ್ಲಿ ಸುಮಾರು 110 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಕೊಪ್ಪಳ ತಾಲೂಕಿನಲ್ಲಿರುವ ಎಂಎಸ್ ಪಿಎಲ್, ಫ್ರಾಕ್ಸೈರ್, ರೇಣುಕಾ ಹೆಸರಿನ ಕೈಗಾರಿಕೆಗಳಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ನಮ್ಮಲ್ಲೇ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿರುವುದರಿಂದ ಜಿಲ್ಲೆಗೆ ಸಮಸ್ಯೆ ಎದುರಾಗದು ಎಂಬ ಬಲವಾದ ನಂಬಿಕೆ ಇದೆ.
ಜಿಲ್ಲಾಸ್ಪತ್ರೆ ಹಾಗೂ ಗಂಗಾವತಿ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕು ಆಸ್ಪತ್ರೆ ಮತ್ತು ಜಿಲ್ಲೆಯ ಒಂಭತ್ತು ಖಾಸಗಿ ಆಸ್ಪತ್ರೆ ಸೇರಿ 13 ಕೋವಿಡ್ ಚಿಕಿತ್ಸಾ ಆಸ್ಪತ್ರೆಗಳಿವೆ. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕಳೆದ ಬಾರಿಯೇ ಕೇಂದ್ರೀಕೃತ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ.